Monday, July 16, 2018

ಶಿಖರಸೂರ್ಯ

ಪುಸ್ತಕದ ಹೆಸರು: ಶಿಖರಸೂರ್ಯ
ಲೇಖಕರು: ಚಂದ್ರಶೇಖರ ಕಂಬಾರ 
ಪ್ರಕಾಶಕರು: ಅಂಕಿತ ಪುಸ್ತಕ 

 " ಗಣಪತಿ ಮದುವೆಗೆ  ನೂರೆಂಟು ವಿಘ್ನ" . ಮುಂದೆ ನಾನು ಹುಟ್ಟಿ ಈ ಗಾದೆಯನ್ನು ಒಂದು ಕೋಟಿ  ಸರ್ತಿ ಬಳಸುತ್ತೇನೆ ಎಂದು ತಿಳಿದೇ ಹಿರಿಯರು ಈ ಗಾದೆಯನ್ನು ಬಹಳ ಹಿಂದೆಯೇ  ಮಾಡಿಟ್ಟು ಹೋಗಿದ್ದಾರೆ ಅಂತ ಅನಿಸಿದೆ. ಈ ಪುಸ್ತಕದ ಓದಿನ ವಿಷಯದಲ್ಲಿ ಈ ಗಾದೆ ನೂರು ಪ್ರತಿಶತ ಸತ್ಯ. 
ಮೊದಲ ನೂರಾ ಮೂರು  ವಿಘ್ನಗಳು , ಕಾದಂಬರಿ ತರಿಸಿದ ತಕ್ಷಣ ನಾನು ಓಡಲಾರದೆ ಮೂರು  ವರ್ಷ ಸುಮ್ಮನೆ ಇಟ್ಟದ್ದು. 
 ನೂರಾನಾಲ್ಕು: ಓದುವಾಗ ಈ ಕಾದಂಬರಿ ಗೆ ಮೊದಲು ಚಕೋರಿ ಓದಬೇಕು ಎಂದು ಗೊತ್ತಾಗಿದ್ದು. 
ನೂರಾ ಐದು : ಚಕೋರಿ ಪುಸ್ತಕ ಕೈಗೆ ಸಿಗಲು ಒಂದು ವಾರ ತಡವಾಗಿದ್ದು. 
ನೂರಾ ಆರು : ಚಕೋರಿ ಮುಗಿಸಿ ಶಿಖರ ಸೂರ್ಯ ಪ್ರಾರಂಭಿಸಿ ಅರ್ಧ ಮುಗಿಸುವ ಹೊತ್ತಿಗೆ ಹಳಗನ್ನಡ ಎಕ್ಸಾಂ ಅನೌನ್ಸ್ ಆಗಿದ್ದು. 
ನೂರಾ ಏಳು: ಹಳಗನ್ನಡ ಪರೀಕ್ಷೆ ಮುಗಿಯುವ ಹೊತ್ತಿಗೆ ನನಗೆ ಕಪ್ಪಂಚು ಬಿಳಿಸೀರೆ ಕಾದಂಬರಿ ಸಿಕ್ಕಿದ್ದು !
ನೂರಾ ಎಂಟು: ಕಪ್ಪಂಚು ಬಿಳಿಸೀರೆ ಮುಗಿಸುವ ಹೊತ್ತಿಗೆ ಮಧುವನ ಸಿಕ್ಕಿದ್ದು. 

ಹೀಗೆ ಹೇಗೋ ಆಗಿ ಕಡೆಗೆ ಒಂದು ದಿನ  ದೃಢ ನಿಶ್ಚಯ ಮಾಡಿ, ಕಾದಂಬರಿ ಹಿಡಿದು ಕುಳಿತು ಒಂದೇ ಗುಕ್ಕಿಗೆ ಓದಿ ಮುಗಿಸಿದ್ದು. ಕಂಬಾರರ ನಾಲ್ಕು ಕಾದಂಬರಿಗಳನ್ನು ಸತತವಾಗಿ ಓದಲಾರಂಭಿಸಿದ ಮೇಲೆ ಅವರ ಬರಹ ಶೈಲಿ ಮತ್ತು ಯೋಚನಾ ಲಹರಿಗಳು ತಕ್ಕಮಟ್ಟಿಗೆ ಅರ್ಥವಾಗತೊಡಗಿತು. ಶಿಖರಸೂರ್ಯದಲ್ಲಿ ಅವರ ಕಥನ ಶಕ್ತಿಯ ವಿಶ್ವರೂಪ ದರ್ಶನ ಆಯಿತು. 

ಕಾದಂಬರಿ ಸಂಪೂರ್ಣವಾಗಿ ಕಾಲ್ಪನಿಕವಾದರೂ, ಅದರ ಮೂಲ ಜಾನಪದದಲ್ಲಿ ಜೀವಂತವಾಗಿರುವ ನಾಗಾರ್ಜುನನ ಕಥೆ.
ಶಿಖರಸೂರ್ಯ  ಎಂಬುದು ಒಂದು ಕಾಲ್ಪನಿಕ ಪಾತ್ರ. ಚಕೋರಿಯಲ್ಲಿ ಚಿನ್ನಮುತ್ತ ಎಂಬ ಪಾತ್ರದ ಮುಂದುವರೆದ ಭಾಗವಾಗಿ ಚಿನ್ನಮುತ್ತ ಶಿಖರಸೂರ್ಯನಾಗುತ್ತಾನೆ. ಚಿನ್ನಮುತ್ತ ಶಿಖರಸೂರ್ಯನಾಗಲು ತೆಗೆದುಕೊಳ್ಳುವ ಸಮಯ ಅತ್ಯಲ್ಪ ಶ್ರಮ ಬಹಳ. ಅನೇಕ ಕುಯುಕ್ತಿಗಳನ್ನು ಬಳಸಿ ತಾನು ವಿಷವಿದ್ಯೆಯನ್ನು ಕಲಿಯುತ್ತಾನೆ. . ಶಿಖರ ಸೂರ್ಯನಾದ ಮೇಲೆ ಅವನ ಹೆಸರಲ್ಲಷ್ಟೇ ಅಲ್ಲ, ವ್ಯಕ್ತಿತ್ವದಲ್ಲೂ ಬಹಳ ಬದಲಾವಣೆಗಳಾಗುತ್ತವೆ.  ಸೇಡು, ಹಠ ಮತ್ತು ಮಹತ್ವಾಕಾಂಕ್ಷೆ ಎನ್ನುವುದು ಮನುಷ್ಯನನ್ನು ಏನೆಲ್ಲಾ ಮಾಡಬಲ್ಲದು, ಮತ್ತು ಏನೇನೆಲ್ಲಾ ಮಾಡಿಸಬಲ್ಲದು ಎಂಬುದಕ್ಕೆ ಕನಕಪುರಿ ಸಾಮ್ರಾಜ್ಯ ಮತ್ತು ಶಿಖರ ಸೂರ್ಯ ಸಾಕ್ಷಿಯಾದರೆ, ಒಳ್ಳೆತನ ಮನುಷ್ಯನನ್ನು ಹೇಗೆ ಮುನ್ನೆಡೆಸುತ್ತದೆ ಎನ್ನುವುದಕ್ಕೆ ಶಿವಾಪುರ, ಶಿವಪಾದ, ನಿನ್ನಡಿ,ಮುದ್ದುಗೌರಿ ಮತ್ತು ರವಿಕೀರ್ತಿ ಸಾಕ್ಷಿಯಾಗುತ್ತಾರೆ 

ಈ ಕಾದಂಬರಿಯಲ್ಲಿ ನಮ್ಮನ್ನು ಬಹಳವಾಗಿ ಕಾಡುವ ಪಾತ್ರ ಶಿವಪಾದ , ಚಂಡೀದಾಸ ಮತ್ತು ಮುದ್ದುಗೌರಿಯದು. ವಿದ್ಯುಲ್ಲತೆ ಕೂಡಾ ಮನಸ್ಸನ್ನು ಬಹಳಕಾಲ ಆವರಿಸಿರುತ್ತಾಳೆ. ಮಹಾರಾಣಿಯ ಪಾತ್ರ ಸ್ವಲ್ಪ ಎಳೆದಂತೆ ಅನಿಸುತ್ತದೆ. ಶಿಖರ ಸೂರ್ಯ ಮತ್ತು ಅವಳ ಭೇಟಿಯ ಆ ಪ್ರಸಂಗದ ಅಗತ್ಯವಿರಲಿಲ್ಲ ಎಂದು ನನ್ನ ಅಭಿಪ್ರಾಯ. ಛಾಯಾದೇವಿ ಮತ್ತು ಚಿಕ್ಕಮ್ಮಣ್ಣಿಯರ ಅಸಹಾಯಕತೆ ಸ್ವಲ್ಪ ಜಿಗುಪ್ಸೆ ತರಿಸುತ್ತದೆ. 

ಕಥೆಯ ಓಘ ಪೂರ್ವಾರ್ಧದಲ್ಲಿ ನಮ್ಮನ್ನು ಎಡೆಬಿಡದಂತೆ ಓದಿಸಿಕೊಂಡು ಹೋಗುತ್ತದೆ, ಉತ್ತರಾರ್ಧ ಸ್ವಲ್ಪ ಹಿಡಿ ತಪ್ಪಿದೆ. ಇದು ಲೇಖಕರಿಗೂ ಪ್ರಾಯಶ: ಅರಿವಾಗಿ ಅಂತ್ಯದಲ್ಲಿ ಬಿಗಿಯನ್ನು ಮತ್ತೆ ತಂದಿದ್ದಾರೆ. ಕಾದಂಬರಿಯ ಅಂತ್ಯ ಸ್ವಲ್ಪ predictable ಆದರೂ ಅದನ್ನು ಹೇಳಿರುವ ರೀತಿ ವಿಶೇಷವಾಗಿದೆ. ಕಾಲ್ಪನಿಕ ಪಾತ್ರದ ಅಂತ್ಯವನ್ನು ಓದುಗರ ಕಲ್ಪನೆಗೆ ಬಿಟ್ಟದ್ದು ಸ್ವಲ್ಪ ಇಷ್ಟ ಆಯಿತು ನನಗೆ.

ಇನ್ನು ಕಂಬಾರರ ಕಥನ ಶೈಲಿಯ ಬಗ್ಗೆ ನಾನು ಏನು ತಿಳಿದೆ  ಅನ್ನುವುದರ ಬಗ್ಗೆ ಸ್ವಲ್ಪ ಬರೆಯಬೇಕು. ಇದು ನಾನು ಓದುತ್ತಿರುವ ಕಂಬಾರರ ಮೂರನೆಯ ಕಾದಂಬರಿ. ಎಲ್ಲಾ ಕಾದಂಬರಿಗಳ ಮೂಲಸ್ಥಾನ ಶಿವಾಪುರ. ಧರ್ಮದ ಸೆಲೆ ಶಿವಪಾದ. ಎಲ್ಲವು ಅವನ ಕರುಣೆ. ಮಾತೃ ಸಂಸ್ಕೃತಿ ಪ್ರಧಾನ ವ್ಯವಸ್ಥೆ ವಿಜೃಂಭಿಸುತ್ತದೆ. ಪ್ರಕೃತಿಗೆ ಮಾನವ ಅಭಿವೃದ್ಧಿಯ ಹೆಸರಿನಲ್ಲಿ ನೀಡುತ್ತಿರುವ ಹಿಂಸೆಯನ್ನು ಕಂಬಾರರು ಬಹಳ ವಿಶಿಷ್ಟ ರೀತಿಯಲ್ಲಿ ಹೇಳುತ್ತಾ ಸಾಗುತ್ತಾರೆ. ಇದು ಒಂಥರಾ ಆಧುನಿಕ ಸಮಸ್ಯೆಯನ್ನು ಫೇರಿಟೇಲ್ ರೀತಿಯಲ್ಲಿ ಹೇಳಿದ ಹಾಗಿರುತ್ತದೆ. ಶಿವನ ಡಂಗುರ ಕಾದಂಬರಿಯಲ್ಲಿ  globalisation ವಸ್ತುವಾದರೆ, ಚಕೋರಿಯಲ್ಲಿ ಸಂಗೀತಗಾರನ fantasy ಅವನಿಗೆ ಹೇಗೆ ಮಾರಕವಾಗುತ್ತದೆ ಎಂಬುದರ ಚಿತ್ರಣವಿದೆ. ಶಿಖರಸೂರ್ಯ alchemist ಒಬ್ಬನ ಕಥೆ. ಹಾಗಾಗಿ, ಕಂಬಾರರ ಕಥಾ canvas ಬೇರೆಯಾದರೂ ಪಾತ್ರಗಳು ಸರಿಸುಮಾರು ಒಂದೇ. (ನಾನು ಓದಿರುವ ಮೂರೂ ಕಾದಂಬರಿಗಳ ಬಗ್ಗೆ ಹೇಳುತ್ತಿರುವುದು), ಶಿಖರ ಸೂರ್ಯ ಕಾದಂಬರಿಯ ಮುನ್ನುಡಿ ನನಗೆ ಒಂದು ಪದವು ಅರ್ಥವಾಗಿರಲಿಲ್ಲ. ಕಾದಂಬರಿ ಪೂರ್ತಿ ಓದಿದ ಮೇಲೆ ಮುನ್ನುಡಿಯ ಮೊದಲ ಪುಟ ಅರ್ಥವಾಗಿದೆ ಅಷ್ಟೇ.
ಮೂರೂ  ಕಾದಂಬರಿಗಳಲ್ಲಿ ನನಗೆ ಚಕೋರಿ  ಹೆಚ್ಚು ಇಷ್ಟವಾಯಿತು.


   

Wednesday, July 11, 2018

ಸದಾನಂದ ಮತ್ತು ಮಧುವನ

ಪುಸ್ತಕಗಳ ಹೆಸರು: ಸದಾನಂದ ಮತ್ತು ಮಧುವನ

ಲೇಖಕರು: ಎಮ್.ಕೆ.ಇಂದಿರಾ


Sequel ಗಳಾಗಿ ಬರುವ ಪುಸ್ತಗಳ ವಿಮರ್ಶೆಯನ್ನು ಒಟ್ಟಿಗೆ ಮಾಡಿದರೆ ಚೆನ್ನ ಎಂದು ಅನಿಸಿ ಈ ವಿಮರ್ಶೆ ಬರೆಯುತ್ತಿದ್ದೇನೆ.
ಸದಾನಂದ ನಾನು ಓದಿದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ. ಅಲ್ಲಿಯವರೆಗೂ  science fiction ಮತ್ತು  classic , ಈ ಎರಡೇ  genre ಗಳನ್ನು ಓದಿ ಅಭ್ಯಾಸವಾಗಿದ್ದ ನನಗೆ ಎಮ್.ಕೆ. ಇಂದಿರಾ ರವರ ಸದಾನಂದ ಹೊಸ ಲೋಕವನ್ನೇ ತೆರೆಯಿತು. ನಮ್ಮ ಈ ಹೊತ್ತಿಗೆ ಬಳಗ ಈ ಕಾವ್ಯವನ್ನು ಚರ್ಚೆ ಗೆ ಎತ್ತಿಕೊಂಡಾಗ ಬಹಳ ಉಲ್ಲಾಸ ಉತ್ಸಾಹಗಳಿಂದ ಪುಸ್ತಕವನ್ನು ತರಿಸಿಕೊಂಡು ಓದಿದ್ದೆ. ಆದರೆ ಕಾರಣಾಂತರಗಳಿಂದ ಆ ಚರ್ಚೆಗೆ ಹೋಗಲಾಗಿರಲಿಲ್ಲ ಮತ್ತು  ಪುಸ್ತಕದ ಬಗ್ಗೆ ಬ್ಲಾಗಲ್ಲಿ ಏನೂ ಬರೆಯಲೂ ಸಹ ಆಗಿರಲಿಲ್ಲ.  ಮೊನ್ನೆ ನಮ್ಮ ಇನ್ನೊಂದು ಪುಸ್ತಕ ಹಂಚಿಕೆಯ ಗುಂಪಾದ "ಪುಸ್ತಕದ ಹುಳುಗಳು"  ಗುಂಪಿನಲ್ಲಿ ತಿಂಗಳ ಪುಸ್ತಕಗಳ ವಿನಿಮಯದ ಸಮಯದಲ್ಲಿ ಮಧುವನ ಪುಸ್ತಕ ದೊರೆಯಿತು. ಇದು ಸದಾನಂದ ಕಾದಂಬರಿಯ ಮುಂದುವರೆದ ಭಾಗ ಎಂದು ಗೊತ್ತಾದಾಗ ಬಹಳ ಖುಷಿಪಟ್ಟು ತಂದು ಓದಿದೆ. ಹಾಗಾಗಿ ಎರಡು ಪುಸ್ತಕಗಳ ವಿಮರ್ಶೆ ಒಟ್ಟಿಗೆ ಬರೆಯಲು ಇದು ಎರಡನೆಯ ಕಾರಣ.

ಸದಾನಂದ:

ಆಗಿನ ಕಾಲಕ್ಕೆ ವಿಧವಾ ವಿವಾಹ ಎಷ್ಟು ಕಷ್ಟ, ಅಪಘಾತದಿಂದ ಹೆಣ್ಣೊಬ್ಬಳು ಅಂಗವಿಕಲೆಯಾದರೆ ಅವಳ ಜೀವನದ ಸ್ಥಿತಿ ಗತಿ ಏನು ಎಂಬುದನ್ನು ಎತ್ತಿ ತೋರಿಸಲಿಕ್ಕೆ , ಶಾಸ್ತ್ರಕ್ಕಿಂತ ಮನಸ್ಸುಗಳ ಮಿಲನ ಮುಖ್ಯ ಎಂದು ಆಗಿನ ಕಾಲದ ಜನಕ್ಕೆ ಅರಿವು ಮೂಡಿಸಲೆಂದೇ ಈ ಕಾದಂಬರಿಯನ್ನು ಲೇಖಕಿ ರಚಿಸಿದ್ದಾರೆ ಎನ್ನಬಹುದು. ಕಮಲ, ಗೌರಿ, ರಾಜು, ಮೂರ್ತಿ, ರಮಾನಂದ, ಮುಕ್ತಾ, ಜಾನಕಿ, ಎಂಕಟಮ್ಮ, ದುಂಡುಮಲ್ಲಿಗೆ ಎಸ್ಟೇಟು, ಚಿಕ್ಕಮಗಳೂರಿನ ಕಾಫಿ ತೋಟ...ಆಹಾ, ಮಲೆನಾಡಿನ ಆ ವರ್ಣನೆ ಅದ್ಭುತ. ಮೂರ್ತಿ ಮತ್ತು ಗೌರಿಯ ಸುತ್ತ ಆರಂಭವಾಗುವ ಈ ಕಥೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳೂತ್ತಾ ಹೋಗುತ್ತದೆ. ರಾಜುವಿನ ಪಾತ್ರ ಇಲ್ಲಿ ನನಗಂತೂ ಬಹಳ ಮೆಚ್ಚುಗೆಯಾದ ಪಾತ್ರ. ಸದಾಕಾಲ ಮನೆಯ ಮತ್ತು ತೋಟದ ಕೆಲಸ ಕಾರ್ಯಗಳನ್ನೂ ಗಮನಿಸಿಕೊಳ್ಳುತ್ತಾ, ತನ್ನ ಅಪ್ಪನಿಗೂ ಆಸರೆಯಾಗಿ ನಿಂತು, ಹಿರಿಯ ಮಗ ಮೂರ್ತಿ ಕೊಟ್ಟ ಪೆಟ್ಟನ್ನು ಚೇತರಿಸಿಕೊಳ್ಳಲಾಗದೇ ತತ್ತರಿಸಿದಾಗ ಮನೆಯ ಊರುಗೋಲಾಗಿ ನಿಂತು, ತನ್ನ ಜವಾಬ್ದಾರಿಗಳನ್ನು ನಿರ್ವಹಿಸಿದ ರೀತಿ, ತನ್ನ ವಿಧವೆ ಅಕ್ಕ ಕಮಲ ಗೆ ಲೈಬ್ರರಿಯಿಂದ ಸದಾನಂದರ ಕಾದಂಬರಿಗಳನ್ನು ಓದಲು ತಂದುಕೊಟ್ಟು, ತಾನೂ ಪುಸ್ತಕಗಳನ್ನು ಓದಿ ಅವರ ಪುಸ್ತಕಗಳಿಂದ ಪ್ರಭಾವಿತನಾಗಿ, ಕಡೆಗೆ ಅವರನ್ನು ಭೇಟಿ ಮಾಡಿ, ಸ್ನೇಹ ಗಳಿಸಿ...ಇನ್ನು ಮುಂದು ಹೇಳಿದರೆ ಕಾದಂಬರಿಯ ಕಥೆಯನ್ನೇ ಬಿಟ್ಟುಕೊಟ್ಟಂಟಾದೀತು. ಒಟ್ಟಿನಲ್ಲಿ, ಮೊದಲ ಕಾದಂಬರಿಯಲ್ಲಿ ರಾಜು-ಗೌರಿಯರ ಪಾತ್ರಕ್ಕೆ ಮೇಲುಗೈ. 

ಕಾದಂಬರಿಯ ಬಹುಪಾಲು  ಸಂಭಾಷಣೆಯಾಗಿ ಸಾಗುವುದು  ಇಲ್ಲಿ ಗಮನಾರ್ಹವಾದ ಅಂಶ . ಲೇಖಕಿ  ಹೇಳಬೇಕಾಗಿರುವುದೆಲ್ಲವನ್ನೂ ಪಾತ್ರಗಳ ನಡೆ-ನುಡಿಗಳ ಮೂಲಕ ಹೇಳಿಸಿರುವುದು ಈ ಕಾದಂಬರಿಯ ಧನಾತ್ಮಕ ಅಂಶಗಳಲ್ಲಿ ಒಂದು. ಕಮಲ ಮತ್ತು ಸದಾನಂದರವರ ವಿವಾಹದೊಂದಿಗೆ ಈ ಸದಾನಂದ ಕಾದಂಬರಿ ಅಂತ್ಯಗೊಳ್ಳುತ್ತದೆ.

ಮಧುವನ:

ಸದಾನಂದ ಕಾದಂಬರಿಯ ಅಂತ್ಯದಿಂದ ಮಧುವನ ಆರಂಭವಾಗುತ್ತದೆ. ಮಧುವನ ಸದಾನಂದರ ಎಸ್ಟೇಟಿನ ಹೆಸರು. ವಿಧುರರಾದ ಸದಾನಂದ ವಿಧವೆ ಕಮಲಾಳನ್ನು ಮದುವೆಯಾಗುವುದರ ಮೂಲಕ ಕಮಲಾಳ ಪ್ರವೇಶ ಮಧುವನಕ್ಕೆ ಆಗುತ್ತದೆ. ವಿಧವಾ ವಿವಾಹವೆಂದರೆ ಹುಬ್ಬೇರಿಸುತ್ತಿದ್ದ ಜನರಿಗೆ ಈ ಕಾದಂಬರಿಯ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ ಎಂದೇ ಹೇಳಬಹುದು. ಕಮಲಳನ್ನು ಸದಾನಂದ ಬದಲಾಯಿಸುವ ರೀತಿ ನಿಜವಾಗಲೂ ಪ್ರತಿಯೊಬ್ಬ ಹೆಣ್ಣು ಮಗಳಿಗೆ ಪಾಠ. ನಾನು ಇದರಿಂದ ಜೀವನದ ಕೆಲವು ಪರಮ ಸತ್ಯಗ್ಫ಼ಳು ಮತ್ತು ಪ್ರಮುಖ ವಿಚಾರಗಳನ್ನು ಕಲಿತೆ. ಇಂದಿರಾರವರು ಬಹಳ ದೂರದೃಷ್ಟಿಯಿಂದ ಈ ಕಾದಂಬರಿಯನ್ನು ಬರೆದಿದ್ದರು ಎಂದೇ ಹೇಳಬೇಕು. ಆಗಿನ ಕಾಲದಲ್ಲಿ ಜನರು ಹೆದರುತ್ತಿದ್ದ C-Section delivery of a child ಬಗ್ಗೆಯೂ ಸಹ ಇಲ್ಲಿ ಪ್ರಸ್ತಾಪವಿದೆ. ಸಾಮಾಜಿಕ ಕಾದಂಬರಿ ಜನರನ್ನು ಬೇಗ ತಲುಪುತ್ತಿದ್ದವಾದ್ದರಿಂದ ಆ ಮೂಲಕ ಜನರನ್ನು ಹೊಸ ವಿದ್ಯಮಾನಗಳಿಗೆ, ಹೊಸ ವಿಚಾರಧಾರೆಗಳಿಗೆ ಪರಿಚಯಿಸುವ ಮತ್ತು ಜಾಗೃತಗೊಳಿಸುವ ಜಬಾಬ್ದಾರಿಯನ್ನು ಲೇಖಕಿ ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. 
ಮಧುವನ ಕಾದಂಬರಿಯ ಮತ್ತೊಂದು ಹೈಲೈಟ್ ಸಾಹಿತ್ಯ. ಸಾಹಿತ್ಯ ಚಿಂತನೆಯಲ್ಲಿ ಒಡಮೂಡಿರುವ ಹೊಸ ಹೊಸ ಕಲ್ಪನೆ ಮತ್ತು ವಿಚಾರಧಾರೆಯನ್ನು ಸದಾನಂದ ಪಾತ್ರದ ಮೂಲಕ ಲೇಖಕಿ ಅದ್ಭುತವಾಗಿ ಓದುಗರಿಗೆ ದಾಟಿಸಿದ್ದಾರೆ. ಲೇಖನಗಳನ್ನು ಹೇಗೆ ಬರೆಯಬೇಕು, ಕಥೆ ಹೇಗೆ ಹುಟ್ಟುತ್ತದೆ, ಅದು ಕಾದಂಬರಿ ಯಾವಾಗ ಆಗುತ್ತದೆ, ಎಲ್ಲರೂ ಯಾವಗಲೂ ಕಾದಂಬರಿಗಳಾನ್ನು ಏಕೆ ಬೆರೆಯಲಾಗುವುದಿಲ್ಲ ಎಂಬ ಗಹನವಾದ ಪ್ರಶ್ನೆಗಳಿಗೆ  ಸಮರ್ಥವಾದ ಉತ್ತರವಿದೆ. ಮಧುವನ ಕಾದಂಬರಿ ನನಗೆ ಹಿಡಿಸಿದ್ದು ಇದಕ್ಕೇ. 

ಮಿಕ್ಕಿದ್ದೆಲ್ಲಾ ಮಾಮೂಲು. ಎಲ್ಲ ಕಾದಂಬರಿಗಳಲ್ಲೂ ಇರುವುದು. ಆಗಿನ ಕಾಲದ "ಫಾರ್ವರ್ಡ್ ಥಿಂಕಿಂಗ್" ಕಾದಂಬರಿಗಳು ಎನ್ನಲಡ್ಡಿಯಿಲ್ಲ.
Wednesday, July 4, 2018

ಕಪ್ಪಂಚು ಬಿಳಿಸೀರೆ

ಪುಸ್ತಕದ ಹೆಸರು: ಕಪ್ಪಂಚು ಬಿಳಿಸೀರೆ
ತೆಲುಗು ಮೂಲ: ಯಂಡಮೂರಿ ವೀರೇಂದ್ರನಾಥ
ಕನ್ನಡ ಅನುವಾದಕರು: ರಾಜಾ ಚೆಂಡೂರ್
ಪ್ರಕಾಶನ: ಸುಧಾ ಎಂಟರ್ಪ್ರೈಸಸ್

ಈವಾಗಲಾದರೂ ಯಂಡಮೂರಿಯನ್ನು ಓದಿದೆನಲ್ಲಾ ಎಂದು ನೆಮ್ಮದಿಯಾಗುತ್ತಿದೆ. ಅವರು ಬಹಳ ಪ್ರಸಿದ್ಧ ಲೇಖಕರೆಂದು ಗೊತ್ತಿತ್ತು. ಅವರ ಬೆಳದಿಂಗಲ ಬಾಲೆ ಕಾದಂಬರಿ ಚಲನಚಿತ್ರ ಆಗಿದ್ದು ಗೊತ್ತಿತ್ತು. ಆದರೆ ಅವರ ಪುಸ್ತಕಗಳು  ಓದಲು ನಾನು ಇಷ್ಟು ವರ್ಷ ಕಾಯಬೇಕಾಗಬಹುದು ಎಂದು ಊಹಿಸಿರಲಿಲ್ಲ. ಪುಸ್ತಕಗಳನ್ನು ನೀಡಿದ ದೃಶ್ಯ ಪ್ರದೀಪ್ ಗೆ ಧನ್ಯವಾದಗಳು.

ಯಂಡಮೂರಿಯವರ ಲೇಖನ ಶೈಲಿ ಬಹಳ  captivating. ಪುಸ್ತಕ ಹಿಡಿದರೆ ಬಿಡುವ ಹಾಗೇ ಇಲ್ಲದಂತೆ  ಓದುಗನನ್ನು ಸೆರೆಹಿಡಿಯುವ ಅನೂಹ್ಯ ಶೈಲಿ. ಅವರ ಕಾದಂಬರಿಗಳು ಚಿತ್ರಗಳಾಗಿದ್ದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ, they are indeed very thrilling.

ಕಪ್ಪಂಚು ಬಿಳಿಸೀರೆ ಸೀರೆ ವ್ಯಾಪಾರಿಯೊಬ್ಬನ ಜೀವನ ಗಾಥೆ. ಹೈದರಾಬಾದಿನ ಬೀದಿಗಳಲ್ಲಿ ಸೀರೆ ಮಾರುತ್ತಿದ್ದವನೊಬ್ಬ ಕೋಟ್ಯಧಿಪತಿಯಾಗಿ, ಕಂಪನಿಯೊಂದರ ಮುಂದಾಳಾಗಿ, ಔನ್ನತ್ಯದ ಮೆಟ್ಟಿಲೇರಿ, ಅಲ್ಲಿಂದ ತಡವರಿಸಿ ಬಿದ್ದು, ಮತ್ತೆ ಎಚ್ಚೆತ್ತುಕೊಳ್ಳುವ ರೋಚಕ ಕತೆಯೇ ಈ ಕಾದಂಬರಿಯ ಜೀವಾಳ. ಸೀರೆಗಳ ಬಗ್ಗೆ, ಫ್ಯಾಷನ್ ಉದ್ಯಮದ ಬಗ್ಗೆ, ಗ್ರಾಹಕರ ಬಗ್ಗೆ, ಅವರ ಮನಸ್ಥಿತಿಯ ಬಗ್ಗೆ, ಮಾರ್ಕೆಟಿಂಗ್ ಒಳಸುಳಿಗಳು,ದ್ರೋಹ, ಮೋಸ,ಕಪಟ,....ನವರಸಗಳೂ ತುಂಬಿದ ಕಾದಂಬರಿಯಲ್ಲಿ ರೋಚಕತೆ ಒಂದು ತೂಕ ಹೆಚ್ಚು.

ಸಾಮಾಜಿಕ ಕಾದಂಬರಿಗಳನ್ನು ಅಷ್ಟಾಗಿ ಓದದ ನಾನು ಮೊದಲು ಕೈಗೆತ್ತಿಕೊಂಡಿದ್ದೇ ಈ ಪುಸ್ತಕ. ಓದಿ ನಿಜವಾಗಲೂ ಬಹಳಷ್ಟು ಕಲಿತೆ, ಸೀರೆ, ನೀರೆ ಮತ್ತು ವ್ಯಾಪರದ ಬಗ್ಗೆ !

ಇದು ಯಂಡಮೂರಿಯವರ ನಂಬರ್ ಓನ್ ಕಾದಂಬರಿ ಎಂದು ಎಲ್ಲರೂ ಸುಲಭಕ್ಕೆ ಹೊಗಳುವುದಿಲ್ಲ ಎಂದು ಕ್ಲೈಮಾಕ್ಸ್ ಓದಿದ ಮೇಲೆ ಅರ್ಥ ಆಯಿತು.

ಅದ್ಭುತ ಪುಸ್ತಕ.ಸದಾ ನೆನಪಿನಲ್ಲಿರುತ್ತದೆ.

ಬೆಸ್ಟ್ ಆಫ್ ಬಿ.ಜಿ.ಎಲ್.ಸ್ವಾಮಿ

ಪುಸ್ತಕದ ಹೆಸರು: ಬೆಸ್ಟ್ ಆಫ್ ಬಿ.ಜಿ.ಎಲ್.ಸ್ವಾಮಿ
ಲೇಖಕರು: ಬೇಲೂರು ರಾಮಮೂರ್ತಿ (ಸಂಪಾದಕರು)
ಪ್ರಕಾಶನ:ಅಂಕಿತ ಪುಸ್ತಕ

ನಾನು ಬಿ.ಜಿ.ಎಲ್. ಸ್ವಾಮಿಯವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ, "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ" ಪುಸ್ತಕ ಒಂದನ್ನು ಬಿಟ್ಟು. ಹಾಗಾಗಿ, ಈ ಪುಸ್ತಕದಲ್ಲಿ ನಾನು ಆ ಪುಸ್ತಕದಿಂದ ಕೆಲವಾದರೂ ಕತೆಗಳು ಸಿಗಬಹುದೆಂಬ ಆಸೆಯಲ್ಲಿದ್ದೆ. ಆದರೆ ನನಗೆ ನಾನು ಓದಿದ್ದ ಪುಸ್ತಕದ ಕತೆಗಳೇ ಓದಿ ಸ್ವಲ್ಪ ಬೇಜಾರಾಯಿತು.

ಇನ್ನೊಂದು ಬೇಜಾರಿನ ವಿಷಯ ಎಂದರೆ, ಇಲ್ಲಿ, ಸ್ವಾಮಿಯವರ ಮಾತೆಲ್ಲಾ passive voice ನಲ್ಲಿರುವುದು. ಅಂದರೆ, ಸಂಪಾದಕರ  "ಸ್ವಾಮಿ ಹೀಗೆ ಹೇಳುತ್ತಾರೆ/ಹೇಳಿದರು" ಎಂಬ ರೀತಿಯ ಬರಹಗಳು ನನ್ನನ್ನು ಮತ್ತಷ್ಟು ನಿರಾಸೆಗೊಳಿಸಿದವು. ಕಾಲೇಜು ರಂಗ, ತರಂಗ, ಹಸಿರು ಹೊನ್ನು, ತಮಿಳು ತಲೆಗಳ ನಡುವೆ, ಇದರಲ್ಲೆಲ್ಲಾ ಸ್ವಾಮಿಯವರೇ ನಿರೂಪಕರು. ಹಾಗಾಗಿ ಹಾಸ್ಯ ನೇರ ನಮಗೆ ಮುಟ್ಟುತ್ತಿತ್ತು. ಬಿದ್ದೂ ಬಿದ್ದೂ ನಕ್ಕಿದ್ದೆ. ಇದರಲ್ಲಿ, ಹಾಸ್ಯ ಮರೆಯಾಗಿ ಬರಿ ವಿಡಂಬನೆಯೇ ಎದ್ದುಕಾಣುತ್ತಿದ್ದು, ಇಲ್ಲಿ ಸ್ವಾಮಿಯವರ ಪರಿಸ್ಥಿತಿ ಬಗ್ಗೆ ಅನುಕಂಪ ಮೂಡಿಬಿಡುತ್ತದೆ !

ನಾನು ಸ್ವಾಮಿಯವರ ಕಟ್ಟಾ ಅಭಿಮಾನಿಯಾಗಿರುವುದರಿಂದ, ಈ ಪುಸ್ತಕ ನನಗಂತೂ ಬೆಸ್ಟ್ ಅನಿಸಲಿಲ್ಲ. ಲೇಖನಗಳು ಬೆಸ್ಟ್. ಅನುಮಾನ ಇಲ್ಲ. ಆದರೇ, ಸ್ವಾಮಿಯವರೇ ನಿರೂಪಕರಾಗಿದ್ದಿದ್ದರೆ ಅದರ ಮಜವೇ ಬೇರೆ ಇರುತ್ತಿತ್ತು ಅನ್ನುವುದು ನನ್ನ ಅಭಿಪ್ರಾಯ.

ಒಮ್ಮೆ ಓದಿ ಪಕ್ಕಕ್ಕಿಡಬಹುದು. 

Friday, April 27, 2018

ಮಹಾಯಾತ್ರಿಕ

ಬಿಭೂತಿಭೂಷಣ ವಂದ್ಯೋಪಾಧ್ಯಾಯರು ರಚಿಸಿದ “ಪಥೇರ್ ಪಾಂಚಾಲಿ” ಕಾದಂಬರಿ ಸುಪ್ರಸಿದ್ಧ. ಬಹಳ ಹಿಂದೆ ಈ ಕಾದಂಬರಿಯ ಹೆಸರು ಕೇಳಿದಾಗಿನಿಂದ ಇದನ್ನೋದಬೇಕೆಂದು ಬಯಸಿದ್ದೆ. ಅದೇನೋ ಹೇಳುತ್ತಾರಲ್ಲ, ಎಲ್ಲವುದಕ್ಕೂ ಕಾಲ ಕೂಡಿಬರಬೇಕೆಂದು. ಒಳ್ಳೆಯ ಪುಸ್ತಕವನ್ನೋದಿ ಅನುಭೂತಿಸಲೂ ಸುಮುಹೂರ್ತ ಕೂಡಿಬರಬೇಕಾಗುತ್ತದೆ ಮತ್ತು ಆ ಒಳ್ಳೆಯ ಘಳಿಗೆ ವೈಯಕ್ತಿಕವಾಗಿ ನಮಗೇನೋ ತುಸು ತೊಂದರೆಯನ್ನುಂಟುಮಾಡಿಯಾದರೂ ಸರಿಯೇ ಸಫಲವಾಗುತ್ತದೆ! ಕಾಲಿಗೆ ಮತ್ತು ಕೈಗೆ ಅನಿರೀಕ್ಷಿತ ಪೆಟ್ಟಾಗಿ ತುಸು ಹೆಚ್ಚೇ ವಿಶ್ರಾಂತಿಯನ್ನು ವೈದ್ಯರು ಹೇರಲು, ಮೊದಲು ಬಹಳ ಕಿರಿಕಿರಿಯಾದರೂ ತಕ್ಷಣ ನನ್ನ ಕಣ್ಣಿಗೆ ಬಿದ್ದಿದ್ದು, ಕೆಲವು ತಿಂಗಳ ಹಿಂದೆ ನಾನೇ ತರಿಸಿಟ್ಟಿದ್ದ “ಮಹಾಯಾತ್ರಿಕ” ಪುಸ್ತಕ! ತಕ್ಷಣ ನೋವು ಎಷ್ಟೋ ಶಮನವಾಗಿತ್ತು. ‘ಪಥೇರ್ ಪಾಂಚಾಲಿ’ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಅಹೋಬಲ ಶಂಕರ ಅವರು. ಇದನ್ನು ಪ್ರಕಟಿಸಿದ್ದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ. ಏನೇನೋ ಕೆಲಸಗಳ ಭಾರದಲ್ಲಿ, ಕೆಲವು ನಾನೇ ಹೇರಿಕೊಂಡ ನೆಪಗಳೊಳಗೆ ಈ ಪುಸ್ತಕವನ್ನೋದುವುದೇ ಮರೆತುಬಿಟ್ಟಿದ್ದೆ. ಧುತ್ತನೆದುರಾದ ಪರಿಸ್ಥಿತಿ ತಲೆಗೊಂದು ಮೊಟಕಿ ಈ ಪುಸ್ತಕವನ್ನು ಕೈಯಲ್ಲಿ ಹಿಡಿಸಿತ್ತು. 

ಮೊದಲ ಹತ್ತಿಪ್ಪತ್ತು ಪುಟಗಳನ್ನೋದಲು ತುಸು ಕಠಿಣವಾಯಿತು. ಕಾರಣ, ಅಂದಿನ ವಂಗದೇಶದ, ಸಾವಿರದ ಒಂಬೈನೂರರ ಆಸು ಪಾಸಿನಲ್ಲಿ ನಡೆವ ಆ ಕಥಾಚಿತ್ರಣವನ್ನು ಹಾಗೂ ಮೂಲ ಭಾಷೆಯ ಸೊಗಡನ್ನು ಹೀರಿ ಅದನ್ನೇ ಇಲ್ಲಿ ಕಟ್ಟಿಕೊಡುವಾಗ ಅನುವಾದಕರು ಕೆಲವೊಂದು ಕಥಾ ಚಿತ್ರಣಗಳನ್ನು, ಅಲ್ಲಿನ ಭಾಷೆಯ ಶೈಲಿಯನ್ನು ಹಾಗೇ ಇಳಿಸಿದ್ದು ಓದಲು ತಿಣುಕಾಡುವಂತೆ ಮಾಡಿತು. ಆದರೆ ಒಮ್ಮೆ ಅದರ ಆತ್ಮವನ್ನು ಹೊಕ್ಕಿದ ಮೇಲೆ, ಈ ರೀತಿಯ ಅನುವಾದದ ಶೈಲಿಯನ್ನು, ಭಾಷೆಯನ್ನು ಅರ್ಥೈಸಿಕೊಂಡು ಅದರ ನಾಡಿಯನ್ನು ಹಿಡಿದ ಮೇಲೆ ನಾನೇ ಕಥೆ ನಡೆವ ಗ್ರಾಮದಲ್ಲಿದ್ದೆ!
ಈ ಕಾದಂಬರಿಯನ್ನೋದುವ ಮೊದಲು ಇದರ ಹಿನ್ನಲೆ, ಮುನ್ನಲೆ ಅಥವಾ ಕನಿಷ್ಟ ಕಥೆಯೇನೆನ್ನುವುದೂ ತಿಳಿದಿರಲಿಲ್ಲ. ಸತ್ಯಜಿತ್ ರೇ ಅವರ ಪಥೇರ್ ಪಾಂಚಲಿಯನ್ನೂ ನಾನು ನೋಡಿರಲಿಲ್ಲ. ಹೀಗಾಗಿ ಬಹಳ ಕುತೂಹಲದಿಂದಲೇ ಪುಸ್ತಕ ಹಿಡಿದದ್ದು. ಮಹಾಯಾತ್ರಿಕ ಎಂಬ ಶೀರ್ಷಿಕೆಯನ್ನೋದಿದ ಮೇಲೆ ಇದು ಬಹುಶಃ ಓರ್ವ ವ್ಯಕ್ತಿಯ ಯಾತ್ರೆಯ, ಪ್ರವಾಸದ ಕಥೆ ಎಂದು ತಿಳಿದಿದ್ದೆ. ಆತ ಬೇರೆ ಬೇರೆ ಪ್ರದೇಶಗಳನ್ನು ತಿರುಗಾಡುತ್ತಾ, ದೇಶಾಂತರ ಹೋಗುತ್ತಾ ತಾನು ಕಂಡದ್ದು ಹೇಳುತ್ತಾನೇನೋ ಎಂದು ಭಾವಿಸಿದ್ದೆ. ಆದರೆ ಸುಮಾರು ನೂರು ಪುಟಗಳನ್ನೋದುವಾಗ ಅರ್ಥವಾಯಿತು ಇದು ಬೇರೆಯದೇ ರೀತಿಯ ಪ್ರಯಾಣವೆಂದು! ಬಹಳ ಸುಂದರ, ಅಷ್ಟೇ ತ್ರಾಸದಾಯಕ, ಮನೋಹರ ಹಾಗೇ ಮನಕಲಕುವ ಕಥಾ ಹಂದರವುಳ್ಳ ವಿಶಿಷ್ಟ ಕಾದಂಬರಿಯಿದು! ಓರ್ವ ದೂರದೂರಿಗೆ ಹೋಗದೇ, ಹೊಸ ತಾಣಗಳನ್ನು ಕಾಣದೇ, ತನ್ನ ಪರಿಸರದ ಸುತ್ತಮುತ್ತಲನ್ನೇ ಸುತ್ತುಹಾಕುತ್ತಾ, ಪ್ರಕೃತಿ ಅಡಗಿಸಿರುವ ನಿಗೂಢನೆಯನ್ನು ಬಯಲಾಗಿಸುತ್ತಾ, ಅದರೊಳಗಿನ ಅನೇಕ ರಹಸ್ಯಗಳನ್ನು ಬಿಚ್ಚಿಡುತ್ತಾ ಹೋಗುವುದೂ ಒಂದು ಮಹಾಯಾತ್ರೆಯೇ, ಅದನ್ನು ನಡೆಸುವವರೆಲ್ಲಾ ಮಹಾಯಾತ್ರಿಕರೇ ಎಂಬುದನ್ನು ಈ ಕಾದಂಬರಿಯನ್ನೋದಿ ಅರಿತುಕೊಂಡೆ.
ಮುಕ್ಕಾಲುವಾಸಿ ಕಥೆ ನಡೆಯೋದು ವಂಗದೇಶದ(ಬಂಗಾಳ ಪ್ರಾಂತ್ಯ) ನಿಶ್ಚಿಂದಿಪುರದ ಸುಂದರ ಪರಿಸರದಲ್ಲಿ ಮತ್ತು ದುರ್ಗಾ ಎಂಬ ೧೩-೧೪ರ ಹರೆಯದ ಅಕ್ಕ ಹಾಗೂ ೮-೯ ವರುಷದ ತಮ್ಮ ಅಪುವಿನ ಸುತ್ತಮುತ್ತಲೂ.
ಸರ್ವಜಯಾ ಮತ್ತು ಹರಿಹರರಾಯ ದಂಪತಿಗಳ ಮಕ್ಕಳಾದ ಅಪು(ಅಪೂರ್ವಚಂದ್ರರಾಯ್) ಮತ್ತು ದುರ್ಗಾ, ಅವರ ಬದುಕಲ್ಲಿ ಯಥೇಚ್ಛಾಗಿ ತುಂಬಿದ ಕಡು ಬಡತನ, ಅವಮಾನ, ಪ್ರತಿ ದಿವಸದ ಕೂಳಿಗೋಸ್ಕರ ಅವರು ನಡೆಸುವ ಹೋರಾಟ ಇದಿಷ್ಟೇ ಎಳೆಯಿಟ್ಟುಕೊಂಡೇ ಅದ್ಭುತವಾಗಿ ಕಥೆ ಹಣೆಯಲಾಗಿದೆ. ಆದರೆ ಎಲ್ಲಿಯೂ ಅವರ ಬಡತನ ನಮ್ಮಲ್ಲಿ ಕೇವಲ ದುಃಖ, ಸಂಕಟವನ್ನು ತುಂಬದೇ, ಅವರನ್ನಾವರಿಸಿದ್ದ ಸುಂದರ ಪಕೃತಿ ನೀಡುವ ಸಾಂತ್ವನ, ಅದರ ಸಂಪತ್ತು ಅವರೊಳಗೆ ತುಂಬುವ ಅಪಾರ ಸಂತೋಷ, ವನದುರ್ಗೆ ಆ ಮುಗ್ಧ ಮಕ್ಕಳ ಮನಸ್ಸನ್ನು ತಿದ್ದಿ, ತೀಡಿ ವಿಕಸಗೊಳಿಸಿ ಅವರೊಳಗೆ ಹನಿಸುವ ಆನಂದಾಶ್ರುಗಳನ್ನು ನಮ್ಮಲ್ಲಿಗೂ ಹರಿಸಿ, ಹಲವೆಡೆ ನಮ್ಮ ಕಣ್ಣಂಚೂ ಒದ್ದೆಯಾಗಿಸಿಬಿಡುತ್ತದೆ. ಆ ಎಳೆಯ ಮಕ್ಕಳು ತಮ್ಮ ವಿಶಾಲ ಕಣ್ಗಳಿಂದ ಮನೆಯೊಳಗಿನ ಬಡತನವ ಮರೆತು ತಮ್ಮ ಗ್ರಾಮ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಉಣ್ಣುತ್ತಾರೆ. ವನದೇವತೆಯು ತನ್ನ ಒಡಲೊಳಗೆ ತುಂಬಿಹ ವಿಪುಲತೆಯನ್ನು ತೋರಿ ಅವರಿಗೆ ಸಿಹಿಯಾದ ಆಹಾರವನ್ನು ನೀಡುತ್ತಾಳೆ. ಅದನ್ನೆಲ್ಲಾ ಮನಸೋ ಇಚ್ಛೆ ಸೇವಿಸುವ ಆ ಇಬ್ಬರು ಎಳೆಯರು ಕೊನೆ ಕೊನೆಗೆ ವಿಶ್ವವನ್ನೇ ಸ್ವಾಹಾ ಮಾಡಲು ಬಯಸುವಂಥ ಹಸಿವಿನಿಂದ ಕಂಡಂದ್ದನ್ನೆಲ್ಲಾ ಕಬಳಿಸುತ್ತಾ ನಮ್ಮೊಳಗೂ ಹಸಿವನ್ನು ಹುಟ್ಟಿಸಿಬಿಡುತ್ತಾರೆ. ಹಗಲಿರುಳೂ ಅವರು ತಿರುಗುವ ಅಂಥದ್ದೊಂದು ಅತ್ಯದ್ಭುತ ಪರಿಸರಕ್ಕೆ ಜೀವಿತದಲ್ಲೊಮ್ಮೆಯಾದರೂ ತಿರುಗಬೇಕೆಂಬ ಬಯಕೆ ಬೆಳೆದುಬಿಡುತ್ತದೆ. ಆದರೆ ಕ್ರಮೇಣ ಕಾದಂಬರಿಯೇ ನಮಗೆ ಕಟುವಾಸ್ತವಿಕತೆಗೂ, ಕಲ್ಪನೆಗೂ ಇರುವ ಅಂತರ ಹಾಗೂ ಮತ್ತೊಬ್ಬರ ಬದುಕಿನಲ್ಲಿ ನಾವು ಕಾಣುವ ಸುಂದರತೆಗೂ, ದೂರದ ಬೆಟ್ಟದ ಸೌಂದರ್ಯಕ್ಕೂ ಇರುವ ಸಾಮ್ಯವನ್ನು ತೋರಿಬಿಡುತ್ತದೆ.
ಆದರೂ ದುರ್ಗಾ ಹಾಗೂ ಅಪುವಿನಲ್ಲಿ ಹೇರಳವಾಗಿರುವ ಪ್ರಕೃತಿ ಜ್ಞಾನ ನಮ್ಮ ಅರಿವನ್ನೂ ಹೆಚ್ಚಿಸುತ್ತದೆ. ಅದರಲ್ಲೂ ವಿಶೇಷವಾಗಿ ಅಪುವಿನ ಕಲ್ಪನಾ ಶಕ್ತಿ, ಅದಕ್ಕೆ ಹದವಾಗಿ ಬೆರೆತ ಮುಗ್ಧತೆ, ಆತನ ಅಪಾರ ಸೌಂದರ್ಯ ಪ್ರಜ್ಞೆ ನಿಬ್ಬೆರಗಾಗಿಸುತ್ತದೆ. ಉದಾಹರಣೆಗೆ ಒಂದೆಡೆ ಅಪು ಗುಡುಗು ಸಿಡಿಲಿನ ಆರ್ಭಟವನ್ನು ಕಂಡು ಹೀಗೆ ಕಲ್ಪಿಸಿಕೊಳ್ಳುತ್ತಾನೆ... “ದೇವರು ಹೇಗೆ ಕತ್ತಿ ಮಸೆಯುತ್ತಾನೆ, ಅದಕ್ಕೇ ಆ ಹೊಳಪು! ಈಸಲ ಖಂಡಿತ ಘರ್ಜನೆ ಮಾಡುತ್ತಾನೆ.”
ಅದೇ ರೀತಿ ಇತ್ತ ದುರ್ಗಾ ಎಂಬ ಪುಟ್ಟ ಕೂಸು, ಕಾಡಿನ ಯಾವ ಮೂಲೆಯಲ್ಲಿ, ಯಾವ ಮರದಲ್ಲಿ ಎಂಥಾ ರೀತಿಯ ಹಣ್ಣು ದೊರಕುತ್ತದೆ, ಹುಲ್ಲುಗಾವಲಿನ ಬಯಲ ಸೌಂದರ್ಯವನ್ನು ಹೇಗೆ ಸವಿಯಬೇಕು, ಬಿದಿರುವನದಲ್ಲಿ ಎಂಥಾ ಬಿದುರು ಬೆತ್ತಕ್ಕೆ, ಕೊಳಲಿಗೆ ಯೋಗ್ಯ, ಯಾರ ಹಿತ್ತಲಿನ, ಯಾವ ಮರದ ಬುಡದಲ್ಲಿ ಗಡ್ಡೆ ಗೆಣಸಿರುತ್ತದೆ, ಎಂಥಾ ಸೊಪ್ಪು ಪದಾರ್ಥಕ್ಕೆ ಯೋಗ್ಯ ಎಂಬೆಲ್ಲಾ ವನ ಪಾಠವನ್ನು ತನ್ನ ತಮ್ಮನಿಗೆ ನೀಡುವಾಗ ನಾವೂ ಕಲಿಯುತ್ತಾ, ಗ್ರಾಮವನ್ನೆಲ್ಲಾ ಅವರೊಂದಿಗೆ ಸುತ್ತಿ, ಕಾಡು, ಮೇಡು, ಬೇಟ್ಟವನ್ನೆಲ್ಲಾ ತಿರುಗಿ ಹೊಟ್ಟೆಯನ್ನು ತುಂಬಿಸಿಕೊಂಡು ಆನಂದ ಪಡುತ್ತೇವೆ.
ಅನುವಾದಕರಾದ ಅಹೋಬಲ ಶಂಕರ ಅವರು ತಮ್ಮ “ಅರಿಕೆ”ಯಲ್ಲಿ ಹೀಗೆ ಹೇಳುತ್ತಾರೆ...
“ವಂಗಸಾಹಿತ್ಯದಲ್ಲಿ ಪಥೇರ್ ಪಾಂಚಾಲಿಯಂತಹ ಕಾದಂಬರಿ ಯಾರೂ ಬರೆದಿರಲಿಲ್ಲ. ಎಲ್ಲಾ ಹೊಸದೇ ಅದರಲ್ಲಿ - ವಸ್ತು ಮತ್ತು ಪಾತ್ರಸೃಷ್ಟಿ ಸರಳವಾದರೂ, ಕಣ್ಣಿಗೆ ಕಟ್ಟುವ ವರ್ಣನೆಗಳು; ಹೆಚ್ಚಾಗಿ ಕಥೆಯಲ್ಲಿ ಮೊದಲಿನಿಂದ ಕಡೆಯವರೆಗೂ ಮನ ಸೆಳೆಯುವ ಅದರ ವಿಚಾರ ದೃಷ್ಟಿ, ಜೀವವರ್ಗದ ಬಗ್ಗೆ ಹೊರಹೊಮ್ಮುವ ಅಂತಃಕರಣ, ವಂಗದೇಶದ ಆತನ ಗ್ರಾಮ ಜೀವನವನ್ನು ವರ್ಣಿಸುವಾಗ ಅತಿಸಾಮಾನ್ಯ, ಅತಿ ಕ್ಷುದ್ರವೆಂಬಂತಹುದನ್ನೂ ಅತಿ ದೊಡ್ಡ ಘಟನೆಯಂತೆಯೇ ಸೂಕ್ಷ್ಮವಾಗಿ, ಅಂತರಂಗಿಕವಾಗಿ ಬಿಡಿಸಿ ಹೇಳುವಿಕೆ, ಹಳ್ಳಿಯ ಜನರ ಜೀವನದಲ್ಲಿ ಹಾಸು ಹೊಕ್ಕಾಗಿ ಬರುವ ಮುಗ್ಧ ಹಾಸ್ಯದೊಂದಿಗೆ ಕರುಳು ಕುಯ್ಯುವ ಒಳವೇಡನೆ, ದಾರಿದ್ರ್ಯದಿಂದ, ಮೌಢ್ಯ-ಅಸಹನೆಗಳಿಂದ ಮನುಷ್ಯನೇ ಮನುಷ್ಯನಾತ್ಮಕ್ಕೆ ಮಾಡುವ ಘೋರ ಅಪಮಾನ-ಇವುಗಳೆಲ್ಲವನ್ನೂ ಉತ್ಪ್ರೇಕ್ಷೆಯಿಲ್ಲದೇ, ರೋಷವಿಲ್ಲದೆ, ಭಾವೋತ್ಕಟನೆಯಿಲ್ಲದೇ ಕಲಾತ್ಮಕವಾಗಿ ನಿರೂಪಿಸಿರುವ ಜಾಣ್ಮೆ, ಬೇರೆ ಯಾರೂ ಪಡೆಯದಿದ್ದ ಹೊಸ ಬಗೆಯ ಕಥನ ಶೈಲಿ, ಕೆಲವೇ ಪದಗಳಲ್ಲಿ ಮನಸ್ಸಿನಲ್ಲಿ ಸದಾ ನಿಲ್ಲಿವಂತೆ ಚಿತ್ರಗಳನ್ನು ಕಟ್ಟುವ ಕುಶಲತೆ-ಇವೆಲ್ಲ ಪಂಡಿತ ಪಾಮರರನ್ನು ಬೆರಗುಗೊಳಿಸಿಬಿಟ್ಟವು.”
***
ತಾಯಿ ಹಾಗೂ ಮಗು ಹೇಗೆ ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಈ ಅನೂಹ್ಯ ಬಾಂಧವ್ಯವನ್ನು ಬೆಸೆದುಕೊಳ್ಳುತ್ತಾರೆ, ಕೇವಲ ತಾಯಿ ಮಾತ್ರ ಕೊಡುವವಳಲ್ಲ, ಮಗುವೂ ತಾಯಿಗೆ ಏನೇನೆಲ್ಲಾ ಧಾರೆಯೆರೆಯುತ್ತದೆ ಎಂಬುದನ್ನು ಬಹಳ ಚೆನ್ನಾಗಿ ವಿವರಿಸಿ ನಮ್ಮ ದೃಷ್ಟಿಕೋನವನ್ನೇ ತೆರೆಯುತ್ತಾರೆ ಲೇಖಕರು.
ಈ ಯಾನದಲ್ಲಿ ನಗುವಿದೆ, ನಿಶ್ಶಬ್ದ ಅಳುವಿದೆ, ಕರುಳು ಕೊರೆವ ಯಾತನೆಯಿದ್ದರೂ ಪ್ರಕೃತಿ ಲೇಪಿಸುವ ಸಾಂತ್ವನವಿದೆ. ಕರ್ಮಫಲ, ಅಂದರೆ ಈ ಜನ್ಮದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ, ಅರೆತೋ ಅರಿಯದೆಯೋ ಮತ್ತೊಂದು ಜೀವಕ್ಕೆ ಕೊಡುವ ನೋವಿನ ಫಲ, ಮತ್ತೋರ್ವ ವ್ಯಕ್ತಿಯನ್ನು ಹಿಂಸಿಸುವ ಫಲ ಈ ಜನ್ಮದಲ್ಲೇ ತೀರಿಸುತ್ತೇವೆ ಅನ್ನೋ ಒಂದು ಕಾನ್ಸೆಪ್ಟ್ (ಇದು ಎಷ್ಟರಮಟ್ಟಿಗೆ ನಿಜ ಅನ್ನೋದರ ಕುರಿತು ಇನ್ನೂ ಸಣ್ಣ ಅನುಮಾನ ಇದೆ ನನ್ನೊಳಗೆ) ಪ್ರಸ್ತುತ ಕಾದಂಬರಿಯ ಕೊನೆಯಲ್ಲಿ ದುರ್ಗಾಳ ಅಮ್ಮ ಹರಿಸುವ ಪಶ್ಚಾತ್ತಾಪದ ಕಣ್ಣೀರಿನಲ್ಲಿ ಎದ್ದು ಕಾಣಿಸುತ್ತದೆ. ಒಂದೆರಡು ಪ್ರಸಂಗಗಳನ್ನೋದಿಯಂತೂ ಪುಸ್ತಕವನ್ನು ಮುಚ್ಚಿಟ್ಟು, ಕಣ್ಮುಚ್ಚಿ ಒಳಗೊಳಗೇ ಅತೀವ ದುಃಖ ಅನುಭವಿಸಿಬಿಟ್ಟೆ. ಅಷ್ಟು ತೀವ್ರವಾಗಿದೆ ಯಾನದ ಆ ಘಟ್ಟ! ಅದನ್ನಿಲ್ಲಿ ಬೇಕೆಂದೇ ಉಲ್ಲೇಖಿಸುತ್ತಿಲ್ಲ. ಓದುಗರು ಓದುತ್ತಾ ಹೋಗುವಾಗ ಹಠಾತ್ ಅದು ಎದುರಾದಾಗಲೇ ಅದರ ಸಹಜ ಭಾವವನ್ನು ಹೀರಬಹುದೆಂದು ಆ ದೃಶ್ಯದ ವರ್ಣನೆಗೆ ಹೋಗುತ್ತಿಲ್ಲ. ಅಲ್ಲದೇ, ಅಲ್ಲಲ್ಲಿ ಬರುವ ಸಣ್ಣ ಕವಿತೆಗಳು, ಜನಪದ ಹಾಡುಗಳೊಳಗಿನ ವಿಡಂಬನೆ ಎಲ್ಲವೂ ಕಥೆಯ ಸ್ವಾದವನ್ನು ಹೆಚ್ಚಿಸುವಂತಿವೆ.
ಮೂಲ ಕಾದಂಬರಿಯನ್ನು ನಾನು ಓದಲು ಸಾಧ್ಯವಿಲ್ಲ. ಆದರೆ ಅನುವಾದ ಬಹಳ ಸಶಕ್ತವಾಗಿ ನಮ್ಮನ್ನಾವರಿಸುವುದಂತೂ ಖಂಡಿತ. ಕೆಲವೊಂದೆಡೆ ಅನುವಾದ ತುಸು ಸಂಕೀರ್ಣವಾಗಿದ್ದು, ಎರಡು ಸಲ ಓದನ್ನು ಬೇಡುವಂತಿದ್ದರೂ, ಓದಿನ ಸುಖಕ್ಕೆ ಅಷ್ಟು ತ್ರಾಸ ತೆಗೆದುಕೊಳ್ಳುವುದು ಒಳ್ಳೆಯದೇ ಎನ್ನಬಹುದು.
ಕಾದಂಬರಿಯನ್ನೋದಿದ ಮೇಲೆ ಅಪಾರ ಕುತೂಹಲದಿಂದ, ಬಹು ಚರ್ಚಿತ, ಎಲ್ಲೆಡೆ ಮಾನ್ಯಗೊಂಡ ಸತ್ಯಜಿತ್ ರೇ ಅವರ ಪಥೇರ್ ಪಾಂಚಾಲಿ ಚಿತ್ರದ ಕೆಲವು ತುಣುಕುಗಳನ್ನು ಹುಡುಕಿ ನೋಡಿದೆ. ಸ್ವಲ್ಪ ನಿರಾಸೆಯಾಯ್ತು. ಯಾವೆಲ್ಲಾ ದೃಶ್ಯಗಳನ್ನು ಪುಸ್ತಕದಲ್ಲೋದಿ ಪುಳಕಿತಳಾಗಿದ್ದೆನೋ ಅದೇ ದೃಶ್ಯವನ್ನೊಳಗೊಂಡ ಒಂದೆರಡು ತುಣುಕುಗಳೇ ಸಿಕ್ಕಿವು ನನಗೆ. ಆದರೆ ಚಿತ್ರದಲ್ಲಿ ಅವುಗಳನ್ನು ಬಹಳ ನೀರಸ ಸಪ್ಪೆಯಾಗಿ ಕಥೆಯನ್ನು ತುಸು ಬದಲಾಯಿಸಿದಂತೇ ಕಂಡಿತು. ಹಾಗೆಯೇ, ಗೂಗಲ್ ಮಾಡಿದಾಗ ಅಪು ದೊಡ್ಡವನಾಗಿ, ಮದುವೆಯಾಗಿ, ಆಮೇಲೆ ಅವನ ಬದುಕು ಬದಲಾದ ಕ್ರಮವೂ ಕಾದಂಬರಿಯಲ್ಲಿದೆ ಎಂಬಂತಹ ಮಾಹಿತಿಗಳೂ ಸಿಕ್ಕವು. ಆದರೆ ಪ್ರಸ್ತುತ ಅನುವಾದಿತ ಕಾದಂಬರಿಯಲ್ಲಿ ಆ ಘಟ್ಟವಿಲ್ಲ! ಮೂಲ ಓದಿದವರು ಅಥವಾ ಬಲ್ಲವರು ಹೇಳಿದರೆ ಬಹಳ ಒಳ್ಳೆಯದು. ಒಟ್ಟಿನಲ್ಲಿ ೪೦೦ ಪುಟಗಳ ಈ ಕಾದಂಬರಿಯ ಯಾನವು ಓದುವಷ್ಟು ಹೊತ್ತು ಮತ್ತು ಓದಿದಾನಂತರವೂ ನಮ್ಮನ್ನು ಬೇರೆಯದೇ ಲೋಕಕ್ಕೆ ಒಯ್ಯಲು ಸಮರ್ಥವಾಗಿದೆ ಎನ್ನುವುದು ನನ್ನ ಅನಿಸಿಕೆ. ಒಮ್ಮೆ ನೀವೂ ಈ ಯಾನದಲ್ಲಿ ಪಾಲ್ಗೊಂಡು ಆ ಇಬ್ಬರು ಪುಟ್ಟ ಮಹಾನ್ ಯಾತ್ರಿಕರ ಸಂಗಡ ಪ್ರಯಾಣಿಸಿ ನೋಡಿ, ಹಾಗೆಯೇ ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ.
ನಾನಂತೂ ವಿಭೂತಿಭೂಷಣರ ಕಥೆಗಳ, ಶೈಲಿಯ ಅಭಿಮಾನಿಯಾಗಿಬಿಟ್ಟಿರುವೆ. ಈಗ ನನ್ನ ಮಗಳು ಹಾಗೂ ತಂಗಿಯ ಮಗನಿಗೆ ಅಪೂ ಮತ್ತು ದುರ್ಗಾರ ಸಾಹಸಗಾಥೆಯನ್ನು, ಬದುಕಲ್ಲಿ ಅವರು ಕಾಣುವ ಕಷ್ಟಗಳು, ನಡೆಸುವ ಹೋರಾಟ, ವನದೇವತೆಯೊಳಗಿರುವ ಸಂಪತ್ತು ಇವೆಲ್ಲವನ್ನೂ ರಸವತ್ತಾಗಿ ಕಥೆ ಹೇಳಲು ತೊಡಗಿರುವೆ. ಆ ಮೂಲಕ ನನ್ನ ಯಾತ್ರೆ ಇನ್ನೂ ಜಾರಿಯಲ್ಲಿದೆ!
ಅಂದಹಾಗೆ "ಪಥೇರ್ ಪಾಂಚಾಲಿ" ಎಂದರೆ Song of the Little Road.
*
ಮಹಾಯಾತ್ರಿಕ
(ಪಥೇರ್ ಪಾಂಚಾಲಿ)
ಮೂಲ : ವಿಭೂತಿಭೂಷಣ ವಂದ್ಯೋಪಾಧ್ಯಾಯ
ಅನು: ಅಹೋಬಲ ಶಂಕರ
ಪುಟಗಳು : ೪೦೨
~ತೇಜಸ್ವಿನಿ ಹೆಗಡೆ.

Thursday, March 22, 2018

ಬೆಳದಿಂಗಳ ಹಿಂದೋಡುವ ಚಕೋರಿ

ಪುಸ್ತಕದ ಹೆಸರು: ಚಕೋರಿ
ಲೇಖಕರು: ಚಂದ್ರಶೇಖರ ಕಂಬಾರ
ಪ್ರಕಾಶಕರು: ಅಂಕಿತ ಪುಸ್ತಕ

ಆದಿಯಲ್ಲಿ ಗಣಪನಿಗೆ ಅಡ್ಡಬಿದ್ದು
ಆಮೇಳೆ ಅವರಪ್ಪನಿಗೆ ಶರಣೆಂದು
ತಾಯಿ ಮಹಾಮಾಯಿಯ ಕರುಣವ ಪಡಕೊಂಡು
ಚಕೋರಿಯ ಬಗೆಗೆ ಹೇಳಹೊಂಟೀವಿ
ಕೇಳು ಭಕ್ತಾ ಕೇಳು

ಅದೇನೆಂದೆನೆ-

ಶಿಖರಸೂರ್ಯ ಓದಲು ಹೋಗಿ ಅದರ ಮೊದಲು ಚಕೋರಿ ಓದಬೇಕೆಂದು ಗೊತ್ತಾಗಿ ಪುಸ್ತಕಕ್ಕಾಗಿ ಊರೆಲ್ಲ ಅಲೆದು ಕಡೆಗೆ ಸಪ್ನಾ ಬುಕ್ ಹೌಸಿನ ಪಾದಕ್ಕೆ ಎಡತಾಕಿದೆವೂ ಶಿವ.

ಆಹ ! ಆಮೇಲೆ ?

ಚಕೋರಿ ಎಂದರೆ ಸಾಮಾನ್ಯಳೇ ?

ಏನು ಸಾಮಾನ್ಯಳೇ ?

ಅವಳು ಒಬ್ಬ ಯಕ್ಷಿ; ಹಸಿರುಕಣ್ಣ ಸುಂದರಿ
ಚಂದಮುತ್ತನೆಂಬ ಕಲಾವಿದನ ಕಲೆಗೆ
ಒಲಿದು ಬೆಳದಿಂಗಳ ಹಿಂದೋಡಲು
ತವಕಿಸಿದ ಪರಲೋಕದ ತರಳೆ.

ಬರುವ ಪ್ರತಿಯೊಂದು ಪಾತ್ರವು ಘನಗಂಭೀರ
ಕಥೆಯ ಮೂಲ ಭಾರತದ ಅಗಾಧ ಜಾನಪದದ ಸಾಗರ
ಚಂದ್ರಸೂರ್ಯರ ಜಗಳದಲ್ಲಿ ನಲುಗಿದಿದ ಚಕೋರಿಯ
ಈ ಪರಿಯ ಸೋಜಿಗದ ಕಥೆಯ ಎಲ್ಲದರೂ ಕೇಳೀರಾ ?

ಕಾವ್ಯದ ಶೈಲಿಯ ಅಪೂರ್ವದ ಕಥೆಯಿದು
ನಾನು ಬರೆದುದನ್ನು ಅರಿಯಬಲ್ಲಿರಾದರೆ
ನೀವು ಚಕೋರಿಯನ್ನೂ ಓದಬಹುದು.

ಕಥೆಯ ಬಿಚ್ಚಿಡಲಾರೆ; ಯಕ್ಷಿಯ ಶಾಪದ ಭಯ !
ಓದಿದವನೇ ಬಲ್ಲ, ಚಕೋರಿಯ ಕಥೆಯ !

ಈ ಕಾವ್ಯವನ್ನು ವ್ರತಾಚರಣೆಯಲ್ಲಿ ಉಪವಾಸ, ಜಾಗರಣೆಗಳನ್ನು ಮಾಡುವಂತೆ, literally ಹಾಗೇ ಓದಿದ್ದೇನೆ. ಅಷ್ಟು ಚೆನ್ನಾಗಿದೆ ! ಹೋಮರ್ ನ ಒಡಿಸ್ಸಿ ಕಾವ್ಯದ ಛಾಯೆ ಕಂಡರೂ ನಮ್ಮ ಜಾನಪದ ಶೈಲಿಯದ್ದೇ ಸೊಗಡು ಹೆಚ್ಚು. ಲಾವಣಿಗಳ ಭರಪೂರ ಮಳೆ ! ನಿಜವಾಗಿಯೂ ಅದ್ಭುತ ಎನಿಸುವ ಕಥನ ಶೈಲಿ. ಎಲ್ಲೂ ಬಿಗಿಯನ್ನು ಕಳೆದುಕೊಳ್ಳದ ನವಿರಾದ, ಸೂಕ್ಷ್ಮದ ಕಥಾಹಂದರ.  ಶಿವಾಪುರ ಎಂಬ ಕಾಲ್ಪನಿಕ ಸ್ಥಳ ನಮಗೆ ಬಹಳ ಆಪ್ಯಾಯಮಾನವೆನಿಸುತ್ತದೆ. ಶಿವನ ಡಂಗುರ ಓದಿ ನಾನು ಬಿದ್ದಾಗ ಆದ ಪೆಟ್ಟು ಸ್ವಲ್ಪ ಸ್ವಲ್ಪವೇ ಮಾಯುತ್ತಿದೆ. ಖಂಡಿತಾ ಒಮ್ಮೆ ಓದಿ ನೋಡಿ. ಕಥೆ ಕಾಲ್ಪನಿಕವಾದರೂ ವಾಸ್ತವ ಮನಸ್ಸನ್ನು ನಾಟುತ್ತದೆ.


Friday, March 9, 2018

ಹೊರಳುದಾರಿ

ಪುಸ್ತಕದ ಹೆಸರು: ಹೊರಳುದಾರಿ
ಲೇಖಕರು: ತೇಜಸ್ವಿನಿ ಹೆಗಡೆ
ಪ್ರಕಾಶಕರು:ಸ್ವಸ್ತಿ ಪ್ರಕಾಶನ

ಕಾದಂಬರಿಗಳಿಗೆ  ಬಹುಮಾನ ಕೊಡುವ ಸ್ವಸ್ತಿ ಪ್ರಕಾಶನಕ್ಕೆ ಮೊದಲು ಅಭಿನಂದಿಸಬೇಕು. ಇಲ್ಲದಿದ್ದರೆ ಇಂತಹಾ ಕಾದಂಬರಿ ಓದುವ ಅವಕಾಶ ನಮಗೆ ಸಿಗುತ್ತಿರಲಿಲ್ಲ.

ಲೇಖಕಿಯೇ ಮುನ್ನುಡಿಯಲ್ಲಿ ಬರೆದುಕೊಂಡಂತೆ, ಇದು ಅವರ ಚೊಚ್ಚಲ ಕಾದಂಬರಿ. ಹೆದರಿ ಹೆದರಿ ಹೆಜ್ಜೆ ಮುಂದಿಡುತ್ತಾ ಹೋಗಿರುವುದು ಕಾದಂಬರಿಯುದ್ದಕ್ಕೂ ಕಾಣಿಸುತ್ತದೆ. ಒಂದೆರಡು ಕಡೆ ಬಿದ್ದೂ ಇದ್ದಾರೆ. ಆದರೆ ಕಡೆಯಲ್ಲಿ ಸ್ವಸಾಮರ್ಥ್ಯದಲ್ಲಿ  ಎದ್ದು ನಿಂತು ಕಾದಂಬರಿಯನ್ನು ಗೆಲ್ಲಿಸಿದ್ದಾರೆ.

ಈ ಕಾದಂಬರಿಯಲ್ಲಿ ಬಹಳ ಇಷ್ಟವಾಗುವುದು ಈಗೀಗ ಮಾಯವೇ ಆಗುತ್ತಿರುವ ಕುಟುಂಬದ ಆಪ್ತತೆ. ಅಜ್ಜ, ದೊಡ್ಡಮ್ಮ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಇವೆಲ್ಲವೂ ಕೇವಲ ಶಬ್ದಕೋಶಗಳಲ್ಲಿ ಮಾತ್ರ ಉಳಿದುಹೋಗುತ್ತಿರುವ ಈ ಕಾಲದಲ್ಲಿ, ಅದನ್ನು ಪಾತ್ರಗಳಲ್ಲಿ ಜೀವಂತವಾಗಿರುವುದು ಖುಷಿ ತರುತ್ತದೆ. ಮಲೆನಾಡಿನ ಕಡೆಯ ಕನ್ನಡ ಭಾಷೆಯ ಸೊಗಡು, ಆ ಪ್ರದೇಶದಷ್ಟೇ ಮನೋಹರವಾಗಿದೆ. ಕಥೆಯು ಮೊದಲು ನಿಧಾನಕ್ಕೆ ಸಾಗುತ್ತದೆ, ಅದು ವೇಗ ಪಡೆಯಲು ಹೆಚ್ಚು ಸಮಯ ತೆಗೆದುಕೊಂಡಿದೆ. ಇದನ್ನು ಲೇಖಕಿಯವರು ಗಮನಿಸಬೇಕು. ಇದು ಓದುಗನ ತಾಳ್ಮೆಯನ್ನು ಕೆಡಿಸುವ ಅಪಾಯವಿದೆ.

ಕಾದಂಬರಿಯ ಕಥಾ ವಸ್ತು ಹೊಸದಲ್ಲ. ನಿರೂಪಣೆ ಕೂಡಾ . ಆದರೆ ಇಲ್ಲಿ ಇಷ್ಟವಾಗುವುದು, ಕಥನ ತಂತ್ರ. ಅದಕ್ಕೆ ಅದರದ್ದೇ ಬೇರೆ ಶೈಲಿ ಇದೆ. ಕಾದಂಬರಿ ಮೆಚ್ಚುಗೆ ಪಡೆಯುವುದು ಇದಕ್ಕೇ.

ಮನಸ್ಸು ಮಾಡಿದರೆ ೩ ಗಂಟೆಗಳಲ್ಲಿ ಓದಿ ಮುಗಿಸಬಹುದಾದ ಕಾದಂಬರಿಯನ್ನೋದಲು ನಾನು ಎರಡು ದಿನ ತೆಗೆದುಕೊಂಡಿದ್ದೇನೆ. ಈ ಕಾದಂಬರಿ ಮಲೆನಾಡಿನಲ್ಲಿ ಸುತ್ತಾಡಿದ ಅನುಭವ ಕೊಡುತ್ತದೆ. ಕಥೆ ಖಂಡಿತಾ ಮನಸ್ಸಿಗೆ ನಾಟುತ್ತದೆ. ನನಗೆ ಇಲ್ಲಿ ಎಲ್ಲರಿಗಿಂತ ಇಷ್ಟವಾಗಿದ್ದು ವಿನೋದನ ಪಾತ್ರ. ಈ ಪಾತ್ರದ ವೈಶಿಷ್ಟ್ಯ ತಿಳಿಯಲು ಪುಸ್ತಕವನ್ನು ಓದಿ.

ಹಂಸಯಾನ ಬರೆಯುವ ಹೊತ್ತಿಗೆ ಲೇಖಕಿ ಬಹಳ ಜಾಗರೂಕರಾಗಿದ್ದಾರಾದ್ದರಿಂದ, ಹೊರಳುದಾರಿಗಿಂತಲೂ ಹಂಸಯಾನ ನನಗೆ ವೈಯಕ್ತಿಕವಾಗಿ ಇಷ್ಟವಾಗಿದೆ.