Sunday, January 28, 2018

ಸದ್ದೇ ಮಾಡದ ಶಿವನ ಡಂಗುರ

ಪುಸ್ತಕದ ಹೆಸರು: ಶಿವನ ಡಂಗುರ
ಲೇಖಕರು: ಚಂದ್ರಶೇಖರ ಕಂಬಾರ
ಪ್ರಕಾಶಕರು: ಅಂಕಿತ ಪುಸ್ತಕ

ಈ ಪೋಸ್ಟನ್ನು ಬರೆಯಲು ಮನಸ್ಸಿಗೆ ಬಹಳ ಬೇಜಾರಾಗುತ್ತಿದ್ದರೂ, ನನಗಾದ ಅನುಭವ ಮತ್ತೊಬ್ಬರಿಗೆ ಆಗದಿರಲಿ ಎಂಬ ಏಕೈಕ ಉದ್ದೇಶದಿಂದ ನಾನು ಬರೆಯಬೇಕಾಗಿದೆ. ಈ ಪುಸ್ತಕ ಬಿಡುಗಡೆಯಾದ ಸಂದರ್ಭದಲ್ಲಿ, ನಾನು ಎಲ್ಲರಂತೆ ಎದ್ದು ಬಿದ್ದು ಆನ್ಲೈನ್ ನಲ್ಲಿ ಆರ್ಡರ್ ಮಾಡಿ ಈ ಪುಸ್ತಕ ತರಿಸಿಕೊಂಡೆ. ಈ ಪುಸ್ತಕದ ಶೀರ್ಷಿಕೆ ಕೇಳಿ,ಪುಳಕಿತಳಾಗಿ,  ನಾನಿದನ್ನು ಪಾಣಿನಿಯ ಮಾಹೇಶ್ವರ ಸೂತ್ರದ ಕಥೆಗೆ ಲಿಂಕ್ ಮಾಡಿ, ಇದು ಭಾಷಾ ಸಾಹಿತ್ಯದ ಮಜಲುಗಳನ್ನು ಭೇದಿಸುವ ಕಾದಂಬರಿ ಇರಬಹುದು, ಅಥವಾ ಭಾಷೆಗಳಲ್ಲಿ ಕಾಲಂತರಗಳಲ್ಲಿ ಉಂಟಾದ ಘರ್ಷಣೆಯ ಬಗ್ಗೆ ಇರಬಹುದು ಅಥವಾ ಶಿವನ ಬಗ್ಗೆಯೇ ಇರಬಹುದೆಂದು ಎಲ್ಲ ಊಹಿಸಿ ಈ ಕಾದಂಬರಿ ಓದಲು ತವಕಿಸಿದೆ. ಕಂಬಾರರ ಮಿಕ್ಕೆಲ್ಲಾ ಪುಸ್ತಕಗಳ ಮೇಲಿದ್ದ ವಿಶ್ವಾಸ ಬೇರೆ ಹೆಚ್ಚಿತ್ತು.  ನಾನು ಈ ಪುಸ್ತಕದ ಬಗ್ಗೆ ಇಷ್ಟೆಲ್ಲಾ ಅಪೇಕ್ಷೆಗಳನ್ನು ಇಟ್ಟುಕೊಂಡಿದ್ದು ನನ್ನ ಮೊದಲನೆಯ ತಪ್ಪು. ಪುಸ್ತಕ  ಕೈ ತಲುಪಿದರೂ ದೌರ್ಭಾಗ್ಯ ವಶಾತ್ ನನಗೆ ಈ ಪುಸ್ತಕವನ್ನು ಆಗಿನಿಂದ ಓದಲೇ ಆಗಿರಲಿಲ್ಲ. ಅದಾದ ಮೇಲೆ ಯಾಕೋ ಏನೋ, ಸುಮಾರು ಎರಡು ವರ್ಷಗಳು ನಾನು ಯಾವುದೂ ಹೊಸ ಪುಸ್ತಕಗಳನ್ನೇ ಕೊಳ್ಳಲಿಲ್ಲ, ಓದಲೂ ಇಲ್ಲ. ಇದು ನಾನು ಮಾಡಿದ ಎರಡನೆಯ ತಪ್ಪು. ಇಂತಿರ್ಪ ಸಂದರ್ಭದಲ್ಲಿ, ನಮ್ಮ ಈ ಹೊತ್ತಿಗೆ ಚರ್ಚಾ ಬಳಗಕ್ಕೆ ನಾನೇ ಈ ಪುಸ್ತಕವನ್ನು ಓದಿ ಚರ್ಚೆ ಮಾಡಲು ಸಲಹೆಯನ್ನು ಕೊಟ್ಟೆ. ಇದು ನಾನು ಮಾಡಿದ ಮೂರನೆಯ ತಪ್ಪು.

ನಾಲ್ಕನೆಯ ಮತ್ತು ಕಟ್ಟಕಡೆಯ ತಪ್ಪು (ಈ ಪುಸ್ತಕದ ಕುರಿತಾಗಿ) ಒಂದಿದೆ. ಮುನ್ನುಡಿ, ಬೆನ್ನುಡಿ ಓದದೆ ನೇರವಾಗಿ ಪುಸ್ತಕ ಓದಲು ಪ್ರಾರಂಭಿಸಿದ್ದು.

ಪುಸ್ತಕ ಓದಲು ಪ್ರಾರಂಭಿಸಿದಾಗ ನನ್ನ ಊಹಾಸೌಧ ಕುಸಿದು ಬೀಳಲು ಐದು ಪುಟಗಳೂ ಹಿಡಿಯಲಿಲ್ಲ. ಆದ ಆಶಾಭಂಗವನ್ನು ಸಾವರಿಸಿಕೊಳ್ಳಲು ಆಗ ಮುನ್ನುಡಿ ಮತ್ತು ಬೆನ್ನುಡಿ ಓದಿದೆ.  ಆಗ ಗೊತ್ತಾಯಿತು ಇದು ನಗರೀಕರಣಕ್ಕೆ ತೆರೆದುಕೊಳ್ಳುವ ಹಳ್ಳಿಯ ತವಕ ತಲ್ಲಣಗಳನ್ನು ಆಧರಿಸಿದ ಕಾದಂಬರಿ ಎಂದು. ಆಯ್ತು, ವಿಷಯ ಪ್ರಸ್ತುತವಾಗಿಯೇ ಇದೆ ಎಂದು ಓದು ಮುಂದುವರೆಸಿದೆ. ಒಬ್ಬೊಬ್ಬರೇ ಪಾತ್ರದ ಪರಿಚಯ ಆಗುತ್ತಾ ಹೋಯಿತು. ಊರ ಗೌಡ, ಭಾಗೀರತಿ, ನಮಶ್ಶಿವಾಯ ಸ್ವಾಮಿ, ಚಂಬಸ,ಶಾರಿ, ಮಾದೇವಿ, ಹೀಗೆ..ಎಲ್ಲರೂ. ಕಥೆಯು ಓದಿಸಿಕೊಳ್ಳುತ್ತಾ ಹೋಯಿತು. ಕೆಲವೆಡೆ ಕೆಲ ಸಾಲುಗಳು ಇಷ್ಟವಾಗುತ್ತಾ ಹೋಯಿತು, ಜೊತೆಗೆ ಕಥೆಯೂ.
ಈ ಕುಂಟಿರಪ ಎನ್ನುವ ಪಾತ್ರ ಕಾದಂಬರಿಯಲ್ಲಿ ಕಾಣಿಸಿಕೊಂಡ ಮೇಲೆ, ಆ ಪಾತ್ರ ಮಾಡುವ ಕೆಲಸಗಳು, ಮಾಡಿಸುವ ಕೆಲಸಗಳಿಂದ ಇಡೀ ಕಾದಂಬರಿ ತನ್ನ ಘನತೆ ಮತ್ತು ಓಘ ಎರಡನ್ನೂ ಕಳೆದುಕೊಳ್ಳುತ್ತದೆ. ಏಕೆಂದರೆ, ಘಟನೆಗಳು ತುಂಬಾ  ಸಿನಿಮೀಯ, ಮತ್ತು ಎಲ್ಲಾ ತಿರುವುಗಳು predictable. ಕೆಲ ಪಾತ್ರಗಳ ಮನಸ್ಥಿತಿಗಳು ತರ್ಕಕ್ಕೆ ನಿಲುಕದಾದವು. ಕಂಬಾರರ ಕಥನ ಶಕ್ತಿಯನ್ನು ಕರಿಮಾಯಿ, ಸಂಗ್ಯಾ ಬಾಳ್ಯಾ ಅಂತಹ ಕಾದಂಬರಿಗಳಲ್ಲಿ ಕಂಡವರಿಗೆ ಈ ಕಾದಂಬರಿ ಅವರೇನಾ ಬರೆದದ್ದು ಅನ್ನುವಷ್ಟು ಆಶ್ಚರ್ಯ ಹುಟ್ಟಿಸುತ್ತದೆ.
ಕಾದಂಬರಿಗಳ ಬಗ್ಗೆ ನಮ್ಮ ಸಾಮಾನ್ಯ ಕಲ್ಪನೆ ಏನೆಂದರೆ, ಅದು ಕಡೇ ಪಕ್ಷ ಒಂದು ವಾರ ನಮ್ಮನ್ನು ಕಾಡಬೇಕು. ಈ ಕಾದಂಬರಿಯ ಕಥಾ ವಸ್ತು ಮತ್ತದರ ಪಾತ್ರಗಳು ನನ್ನನ್ನು ಮೂರು ದಿನವೂ ಕಾಡದೇ ಹೋಯಿತು, ಶಾರಿಯ ಪಾತ್ರವೊಂದನ್ನು ಬಿಟ್ಟು. ಆ ಪಾತ್ರ ನಾಲ್ಕು ದಿನ ತಲೆಯೊಳಗಿತ್ತು, ಯಾಕಂದರೆ ಆ  ಪಾತ್ರದ ಮನಸ್ಥಿತಿ ಇನ್ನೂ ನನ್ನ ತರ್ಕಕ್ಕೆ ನಿಲುಕಿಲ್ಲ, ಪ್ರಾಯಶಃ ನಿಲುಕುವುದೂ ಇಲ್ಲ.
ಹಳ್ಳಿಗರ ಧನದಾಸೆ, ಸಿಟಿಯವರ ಆಡಂಬರ, ಅವರ ನಯವಂಚಕತೆ,  ಹಳ್ಳೀಗರ ಮುಗ್ಧತೆಯ ದುರುಪಯೋಗ ಇವೆಲ್ಲ ಕಾದಂಬರಿಯ ಪೂರ್ವಾರ್ಧದಲ್ಲಿ ಬಹಳ ಸಮರ್ಥವಾಗಿ ಬಳಸಿಕೊಳ್ಳಲಾಗಿದೆಯಾದರೂ, ಉತ್ತರಾರ್ಧ ನಮ್ಮನ್ನು ತೀರಾ ನಿರಾಸೆಗೊಳಿಸುತ್ತದೆ. ಒಟ್ಟಿನಲ್ಲಿ, ಶೀರ್ಷಿಕೆ ನೋಡಿ, ಚೆನ್ನಾಗಿದೆಯೆಂದು ನಂಬಿ, ನಾನು ಓದದೇ ಬೆರೆಯವರಿಗೆ ಓದಲು ಪ್ರೇರೇಪಿಸಿ, ಆನಂತರದಲ್ಲಿ ಓದಿ ನಿರಾಶಳಾದ ಪ್ರಪ್ರಥಮ ಕಾದಂಬರಿ ಇದು. ಕಂಬಾರರೇ I am sorry, I am not impressed by this novel. ಏಕೆಂದರೆ, ಶಿವನ ಡಂಗುರದ ಸದ್ದು ನನಗೆ ಖಂಡಿತಾ ಜೋರಾಗಿ ಕೇಳಲಿಲ್ಲ.