Friday, February 23, 2018

ಅಜ್ಞಾತನೊಬ್ಬನ ಆತ್ಮಚರಿತ್ರೆ

ಪುಸ್ತಕದ ಹೆಸರು: ಅಜ್ಞಾತನೊಬ್ಬನ ಆತ್ಮಚರಿತ್ರೆ
ಲೇಖಕರು:ಕೃಷ್ಣಮೂರ್ತಿ ಹನೂರು
ಪ್ರಕಾಶಕರು: ಅಂಕಿತ ಪುಸ್ತಕ.

ನಾನು ಪುಸ್ತಕಗಳನ್ನು ತರಕಾರಿಗಳಂತೆ ಕೆಜಿಗಟ್ಟಲೆ ಕೊಳ್ಳುತ್ತೇನೆ ಮತ್ತು ತರಕಾರಿಗಳನ್ನು ಪುಸ್ತಕದಂತೆ ಆರಿಸಿ ಆರಿಸಿ ಕೊಳ್ಳುತ್ತೇನೆ ಎಂಬ ಆರೋಪ ಮಿಶ್ರಿತ ಹೊಗಳಿಕೆಯನ್ನು ನಮ್ಮ ಮಾತೃಶ್ರೀಯವರು ಆಗಾಗ ನೀಡುತ್ತಿರುತ್ತಾರೆ. ಈ ತರಹ ಕೇಜಿಗಟ್ಟಲೆ ಕೊಂಡ ಪುಸ್ತಕಗಳು ಸಾಮಾನ್ಯ ನಾನು ಟೈಟಲ್ ನೋಡಿ ಕೊಂಡದ್ದಾಗಿರದೇ, ಸ್ವಲ್ಪ ಮುನ್ನುಡಿಯೋ ಬೆನ್ನುಡಿಯೋ ಓದಿ ಕೊಂಡದ್ದಾಗಿರುತ್ತದೆ, ಇಲ್ಲಾಂದರೆ  ಅಂಕಿತ ಪುಸ್ತಕದ  ಸುಧಾ ಆಂಟಿಯ ರೆಕ್ಮೆಂಡೇಷನ್ ಆಗಿರುತ್ತದೆ. ಹಾಗೆಯೇ ೨೦೧೩ ರಲ್ಲಿ ಖರೀದಿಸಿ ಇಟ್ಟುಕೊಂಡಿದ್ದಂತಹ ಪುಸ್ತಕ "ಅಜ್ಞಾತನೊಬ್ಬನ ಆತ್ಮಚರಿತ್ರೆ". ತ.ರಾ.ಸು ರವರ ಚಿತ್ರದುರ್ಗದ ಕಾದಂಬರಿಗಳ ಸೀರೀಸ್ ಅನ್ನು ಓದುತ್ತಿದ್ದ ಕಾಲವದು. ಈ ಪುಸ್ತಕ ಟಿಪ್ಪುಸುಲ್ತಾನನ ದಳವಾಯಿಯೊಬ್ಬನ ಆಗಿನಕಾಲದ ದಿನಚರಿಯಾಧಾರಿತ ಕಾದಂಬರಿ ಎಂದು ಸುಧಾ ಆಂಟಿ ಹೇಳಿದ ತಕ್ಷಣ ಮರುಮಾತಾಡದೇ ಕೊಂಡುತಂದಿದ್ದೆ. ಕೇವಲ ಬಾದಶಾಹಗಳ ದಿನಚರಿಗಳ ಬಗ್ಗೆ ಕೇಳಿದ್ದ ನಾನು(ಅಕ್ಬರ್ ನಾಮ, ಹೈದರ್ ನಾಮ, ಇತ್ಯಾದಿ), ದಳವಾಯಿಯೊಬ್ಬನ ಆತ್ಮಚರಿತ್ರೆಯನ್ನೋದಲು ಬಹಳ ಉತ್ಸಾಹಿತಳಾಗಿದ್ದೆ. ಆದರೆ ಆ ಸಂದರ್ಭದಲ್ಲಿ ನಮ್ಮ ಮನೆಯಲ್ಲಿ ಕೆಲವು ಶುಭ ಸಮಾರಂಭಗಳು ನಡೆದು, ನಾನದರಲ್ಲಿ ಮುಳುಗಿಹೋಗಿದ್ದೆ. ಕಾಲ ಸರಿದಂತೆ ಈ ಪುಸ್ತಕವೂ ನನ್ನ ನೆನಪಿನಿಂದ ಸರಿದು ಹೋಗಿತ್ತು, ೨೦೧೮ ರ ಜನವರಿ ವರೆಗೂ.

ಈ ಪುಸ್ತಕ ನನ್ನ ನೆನಪಿನ ಸಂಚಿಯಿಂದ ಸರಿದು ಹೋಗಿದ್ದೇ ಒಳ್ಳೆಯದಾಯಿತು. ಏಕೆಂದರೆ  ನಾನು ಆ ಪುಸ್ತಕವನ್ನ ಓದಲು ಮಾಡಕೊಳ್ಳಬೇಕಿದ್ದ ಸಿದ್ಧತೆ ೨೦೧೩ ರಲ್ಲಿ  ಮಾಡಿಕೊಂಡಿರಲಿಲ್ಲ, ಮತ್ತು ಈ ಪುಸ್ತಕ ಆ ಸಿದ್ಧತೆಗಳನ್ನು ಬೆಡಬಹುದು ಎಂಬುದೂ ಆಗ ನನಗೆ ಗೊತ್ತಿರಲಿಲ್ಲ. ೨೦೧೭ ರಲ್ಲಿ ನಾನು ಬಿ.ಎಮ್.ಶ್ರೀ.ಪ್ರತಿಷ್ಟಾನದಲ್ಲಿ ಹಳಗನ್ನಡ ರಸಗ್ರಹಣ ಶಿಬಿರವನ್ನು ಅಟೆಂಡ್ ಮಾಡಿದ್ದೆ. ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿದ ಶಿಬಿರ ಅದು.ಅದರ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ.  ಅದು ಮುಗಿದ ನಂತರ ಈಗ ಹಳಗನ್ನಡದಲ್ಲಿ ಡಿಪ್ಲೋಮಾ ಮಾಡುತ್ತಿದ್ದೇನೆ. ಈ ಡಿಪ್ಲೋಮ ತರಗತಿಯಲ್ಲಿ ನಮಗೆ ವೀರಗಲ್ಲು ಮತ್ತು ಶಾಸನಗಳ ಕುರಿತ ಅಧ್ಯಯನದ ಬಗ್ಗೆ ಒಂದು ವಿಶೇಷ ಪಠ್ಯವಿದೆ. ಅಲ್ಲದೆ, ತಾಳೆಗರಿಗಳು, ಅದರ ಅಧ್ಯಯನ ಮತ್ತು ಸಂರಕ್ಷಣೆ ಬಗ್ಗೆ ಸಹ ಪಾಠಗಳಿವೆ. ಇವೆಲ್ಲವನ್ನೂ ನಾನು ಕೇಳಿ,  ಓದುತ್ತಿದ್ದೆ  ಈ ವರ್ಷದ ಜನವರಿಯಲ್ಲಿ.

 ಜನವರಿಯ ಈ ಹೊತ್ತಿಗೆ ಚರ್ಚೆಗೆ ಶಿವನ ಡಂಗುರ ಪುಸ್ತಕವನ್ನು ಓದಿ ಹತಾಶಳಾದ ಸಂದರ್ಭದಲ್ಲಿ, ನಾನು ಮತ್ತು ತೇಜಸ್ವಿನಿ ಹೆಗಡೆ ಫೋನಲ್ಲಿ ಮಾರ್ಚ್ ತಿಂಗಳ ಈ ಹೊತ್ತಿಗೆ ಚರ್ಚೆಗೆ ಯಾವ ಪುಸ್ತಕ ಓದಬಹುದು ಎಂದು ಚರ್ಚಿಸುತ್ತಿದ್ದೆವು. ನಾನು ಆಗ ಹೇಳಿದೆ, " ಅಯ್ಯೋ, ನಾನಿನ್ನೂ ಓದದೇ ಇರುವ ಪುಸ್ತಕಗಳು ಬೇಕಾದಷ್ಟಿದೆ. ಬರೀ ಕೊಂಡು ತಂದು ಶೆಲ್ಫ್ ಎಲ್ಲ ತುಂಬಿಸಿಟ್ಟಿದ್ದೇನೆ. ಮೊದಲು ಅದನ್ನು ಓದುತ್ತೇನೆ. ಆಮೇಲೆ ಅದು ಚರ್ಚೆ ಮಾಡಬಹುದು ಅನಿಸಿದರೆ ಮಾತ್ರ ಈ ಹೊತ್ತಿಗೆಗೆ ಸಜೆಸ್ಟ್ ಮಾಡುತ್ತೇನೆ" ಅಂತ. ಆಗ, ನನ್ನ ಬುಕ್ ಶೆಲ್ಫ್ ನಲ್ಲಿ ನನಗೆ ಕಂಡ ಪುಸ್ತಕವೇ ಅಜ್ಞಾತನೊಬ್ಬನ ಆತ್ಮಚರಿತ್ರೆ. ಇದನ್ನು ಅವರಿಗೂ ಹೇಳಿದೆ. ಅದಕ್ಕೆ ಅವರು, ಮೊದಲು ನೀವು ಓದಿ, ಆಮೇಲೆ ನನಗೆ ಹೇಳಿ,ಮತ್ತೆ ಯೋಚಿಸೋಣ ಅಂದರು.

ಫೋನಿಟ್ಟು ಪುಸ್ತಕವನ್ನು ತೆರೆದು ಓದಲು ಪ್ರಾರಂಭಿಸಿದೆ. ಮುನ್ನುಡಿ ಓದಿದ ತಕ್ಷಣವೇ ನಾನು ಕುಣಿಯುತ್ತಿದ್ದೆ ! ಮಲೈ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಇರುವ ಒಂದು ವೀರಗಲ್ಲು, ಮತ್ತು ಅದರ ಮೇಲೆ ಕೆತ್ತಿಸಿರುವ ಶಾಸನದ ಪಠ್ಯದಿಂದ ಕಾದಂಬರಿ ಪ್ರಾರಂಭವಾಗುತ್ತದೆ. ಅಲ್ಲಿ ಅವರು ಬಳಸಿದ ಪದಗಳೆಲ್ಲ ಓದಿ, ಸಧ್ಯ ನಾನು ಶಾಸನಗಳ ಬಗ್ಗೆ ತಿಳಿದದ್ದು ಸಾರ್ಥಕವಾಯಿತು ಎಂದು ಖುಶಿ ಪಟ್ಟೆ. ಶಾಸನಗಳ ಬಗ್ಗೆ ಅಧ್ಯಯನ ಮಾಡಿಲ್ಲದವರಿಗೆ ಸಹ ಇದು ಅರ್ಥವಾಗುತ್ತದೆಯಾದರೂ,ಶಾಸನಗಳನ್ನು ಅಧ್ಯಯನ ಮಾಡಿದವರಿಗೆ ಈ ಶಾಸನವನ್ನು ಅರ್ಥೈಸಲು ಕಾದಂಬರಿಕಾರ ಪಟ್ಟ ಕಷ್ಟದ ಸಂಪೂರ್ಣ ಅರಿವಾಗುತ್ತದೆ. ಆಮೇಲೆ, ಈ ಕಾದಂಬರಿಕಾರರ ಬಗ್ಗೆ ಮತ್ತಷ್ಟು ತಿಳಿಯಬೇಕೆಂಬ ಕುತೂಹಲ ಕೆರಳಿತು. ಲೇಖಕರ ಪರಿಚಯವನ್ನು ಪುಸ್ತಕದದ ಕಡೆಯ ಪುಟದಲ್ಲಿ ನೀಡಲಾಗಿತ್ತು. ಅದನ್ನೋದಿದ ಮೇಲೆ ಗೊತ್ತಾಯಿತು, ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದವರು, ಜಾನಪದ ಸಾಹಿತ್ಯದಲ್ಲಿ ಪಿ ಎಚ್.ಡಿ ಪಡೆದಿದ್ದಾರೆ ಎಂದು . ಕ್ಷೇತ್ರ ಕಾರ್ಯದಲ್ಲಿ ತೊಡಗಿದಾಗ ಅವರಿಗೆ ಸಿಕ್ಕ ಕೆಲವು ಜಾನಪದ ಕಥೆಗಳನ್ನು ಆಧರಿಸಿ, ಕಲ್ಪನೆಗಳನ್ನು ಹದವಾಗಿ ಬೆರೆಸಿ ಈ ಕಾದಂಬರಿ ರಚಿಸಿರುವುದರ ಬಗ್ಗೆ ಅವರು ಮುನ್ನುಡಿ ಮತ್ತು ಟಿಪ್ಪಣಿಗಳಲ್ಲಿ ಹೇಳಿಕೊಂಡಿದ್ದಾರೆ.

ಯುದ್ಧದಲ್ಲಿ ಹೋರಾಡುವ ಸೈನಿಕನ ಶೌರ್ಯ ಸಾಹಸಗಳ ವರ್ಣನೆ ನಾವು ಬಹಳ ಕೇಳಿರುತ್ತೇವೆ. ನಮಗೆ ವೀರ ಎಂದರೆ ಒಂದು ನಿರ್ದಿಷ್ಟ ಕಲ್ಪನೆ ಇರುತ್ತದೆ. ಈ ಕಾದಂಬರಿ ನಮಗೆ ವೀರರ ಇನ್ನೊಂದು ಮುಖದ ದರ್ಶನ ಮಾಡಿಸುತ್ತದೆ. ಹೆಚ್ಚು ಹೇಳಿದರೆ ಕಾದಂಬರಿಯ ಕಥೆಯನ್ನು ಹೇಳಿಬಿಟ್ಟಂತಾಗುತ್ತದೆ. ಆದ್ದರಿಂದಸ್ವಲ್ಪವೇ ಗುಟ್ಟು ಬಿಟ್ಟುಕೊಡುತ್ತೇನೆ. ಟಿಪ್ಪು ಸುಲ್ತಾನನನ್ನು ಕಣ್ಣಾರೆ ಕಂಡ, ಅವ್ಅನ ಖಾಸಾ ಬಂಟನಾಗಿದ್ದ ಈ ವೀರಗಲ್ಲಿನ  ದಳವಾಯಿ, ಸುಲ್ತಾನನಿಂದ ಒಂದು ಕೆಲಸಕ್ಕೆ ನೇಮಿಸಲ್ಪಟ್ಟು ಹತ್ತಿಪ್ಪತ್ತು ಸೈನಿಕರೊಂದಿಗೆ ಮಲೈ ಮಹದೇಶ್ವರ ಬೆಟ್ಟದ ತಪ್ಪಲಿನ ಕಡೆಗೆ ತೆರಳುತ್ತಾನೆ. ಕಾವೇರಿ ನದಿ ದಂಡೆಯಲ್ಲಿ ಸಂಭವಿಸುವ ಒಂದು ಅಪಘಾತ ದಳವಾಯಿಯ ಜೀವನದ ದಿಕ್ಕನ್ನೇ ಬದಲಿಸಿಬಿಡುತ್ತದೆ. ಕ್ಷಣ ಕ್ಷಣಕ್ಕೂ ರೋಚಕವಾಗಿರುವ ಈ ಕಾದಂಬರಿ ಕೊನೆಯಲ್ಲಿ ಕಣ್ಣಂಚು ತೇವವಾಗಿಸುತ್ತದೆ.

ಈ ಕಥೆಯು ಕೆಲವೆಡೆ ಆರ್.ಕೆ.ನಾರಾಯಣ್ ಅವರ "ದಿ ಗೈಡ್" ಕಥೆಯನ್ನು ನೆನಪಿಸುತ್ತದೆಯಾದರು, ಯಾರ ಕಥೆ ಯಾರಿಗೆ ಸ್ಪೂರ್ತಿಯಾಗಿದೆ ಎಂದು ಹೇಳಲು ಕಷ್ಟವಾಗುತ್ತದೆ.ಈ ಕಾದಂಬರಿಯ ಆಧಾರ ಜಾನಪದ ಎಂದು ಕಾದಂಬರಿಕಾರರು ಟಿಪ್ಪಣಿಗಳಲ್ಲಿ ಕಥೆಯ ಮೂಲದ  ಬಗ್ಗೆ ಕೂಲಂಕುಷವಾಗಿ ತಿಳಿಸಿದ್ದಾರೆ. ಮೂವತ್ತು ಪುಟಗಳ ದಫ್ತರದ ಕಥೆಯೊಂದು ಇನ್ನೂರು  ಚಿಲ್ಲರೆ ಪುಟಗಳ ಕಾದಂಬರಿಯಾದದ್ದು ಹೇಗೆ ಎಂದು ಏಳುವ ಪ್ರಶ್ನೆಗೆ ಅವರ ವಿದ್ವತ್ತು, ಕಥನ ಶಕ್ತಿ ಮತ್ತು ಕಲ್ಪನಾ ಸಾಮರ್ಥ್ಯಗಳು ಕಾದಂಬರಿಯುದ್ದಕ್ಕೂ ಉತ್ತರವಾಗಿ ನಿಲ್ಲುತ್ತಾ ಹೋಗುತ್ತದೆ. ಈ ಕಾದಂಬರಿ ನನಗೆ ಎಷ್ಟು ಇಷ್ಟವಾಗಿದೆ ಎಂದರೆ, ಸುಮಾರು ಹದಿನೈದು ದಿನ ನಾನು ಮಲೈ ಮಹದೇಶ್ವರ ಬೆಟ್ಟಗಳಲ್ಲಿ ಮಾನಸಿಕವಾಗಿ ಸುತ್ತಾಡಿದ್ದೇನೆ. ವೀರಗಲ್ಲನ್ನು ನಾನು ಓದಿದ ರೀತಿಗಳಲ್ಲಿ ಕಲ್ಪಿಸಿಕೊಂಡಿದ್ದೇನೆ. ಕೊನೆಗೆ ಯಾವುದೂ ಸರಿಹೋಗದೆ, ಈ ಕಥೆಯ ವೀರಗಲ್ಲು ಸುಳ್ಳೋ ನಿಜವೋ ಎಂದು ಲೇಖಕರಿಗೆ ಪತ್ರವನ್ನೂ ಬರೆಯಲು ಯೋಚಿಸಿದ್ದೇನೆ. ಸಿಕ್ಕಾಪಟ್ಟೆ ಕುತೂಹಲ ಇದೆ, ಅವರು ಕಥಾಸಾಮಾಗ್ರಿಯನ್ನು ಸಂಗ್ರಹಿಸಿಕೊಂಡ ರೀತಿಗಳಲ್ಲಿ, ಮತ್ತು ಅವರು ಇದೇ ವಸ್ತುವನ್ನು ಏಕೆ ಆರಿಸಿಕೊಂಡರು ಎಂಬ ವಿಷಯದಲ್ಲಿ. I know curiosity kills the cat, but I am ready to get killed. ಈ ಪೋಸ್ಟ್ ಬರೆದ ತಕ್ಷಣ ನಾನು ಮಾಡುವ ಮುಂದಿನ ಕೆಲಸವೇ ಲೇಖಕರಿಗೆ ಪತ್ರ ಬರೆಯುವುದು !

ಈ ಪುಸ್ತಕ ನಮ್ಮ ಹಲವಾರು ಭ್ರಮೆಗಳನ್ನು ಹುಸಿಗೊಳಿಸಿದರೂ ಹೊಸ ಕಲ್ಪನೆಗಳನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ. ಅದಕ್ಕೆ ಹನೂರರಿಗೆ ಧನ್ಯವಾದ ಹೇಳಲೇ ಬೇಕಿದೆ. ಅವರ ವಿದ್ವತ್ತಿಗೆ ಶರಣು. Seriously , ಇದೊಂದು ಓದಲೇ ಬೇಕಾದ ಪುಸ್ತಕ. Thanks ಸುಧಾ ಆಂಟಿ ಈ ಅದ್ಭುತ ರೆಕ್ಮೆಂಡೇಷನ್ ಗೆ ! Better late than never ಎನ್ನುವ ಹಾಗೆ ಈಗಲಾದರೂ ಪುಸ್ತಕ ಓದಿದೆನಲ್ಲ, ನನ್ನ ಪುಣ್ಯ !