Thursday, March 22, 2018

ಬೆಳದಿಂಗಳ ಹಿಂದೋಡುವ ಚಕೋರಿ

ಪುಸ್ತಕದ ಹೆಸರು: ಚಕೋರಿ
ಲೇಖಕರು: ಚಂದ್ರಶೇಖರ ಕಂಬಾರ
ಪ್ರಕಾಶಕರು: ಅಂಕಿತ ಪುಸ್ತಕ

ಆದಿಯಲ್ಲಿ ಗಣಪನಿಗೆ ಅಡ್ಡಬಿದ್ದು
ಆಮೇಳೆ ಅವರಪ್ಪನಿಗೆ ಶರಣೆಂದು
ತಾಯಿ ಮಹಾಮಾಯಿಯ ಕರುಣವ ಪಡಕೊಂಡು
ಚಕೋರಿಯ ಬಗೆಗೆ ಹೇಳಹೊಂಟೀವಿ
ಕೇಳು ಭಕ್ತಾ ಕೇಳು

ಅದೇನೆಂದೆನೆ-

ಶಿಖರಸೂರ್ಯ ಓದಲು ಹೋಗಿ ಅದರ ಮೊದಲು ಚಕೋರಿ ಓದಬೇಕೆಂದು ಗೊತ್ತಾಗಿ ಪುಸ್ತಕಕ್ಕಾಗಿ ಊರೆಲ್ಲ ಅಲೆದು ಕಡೆಗೆ ಸಪ್ನಾ ಬುಕ್ ಹೌಸಿನ ಪಾದಕ್ಕೆ ಎಡತಾಕಿದೆವೂ ಶಿವ.

ಆಹ ! ಆಮೇಲೆ ?

ಚಕೋರಿ ಎಂದರೆ ಸಾಮಾನ್ಯಳೇ ?

ಏನು ಸಾಮಾನ್ಯಳೇ ?

ಅವಳು ಒಬ್ಬ ಯಕ್ಷಿ; ಹಸಿರುಕಣ್ಣ ಸುಂದರಿ
ಚಂದಮುತ್ತನೆಂಬ ಕಲಾವಿದನ ಕಲೆಗೆ
ಒಲಿದು ಬೆಳದಿಂಗಳ ಹಿಂದೋಡಲು
ತವಕಿಸಿದ ಪರಲೋಕದ ತರಳೆ.

ಬರುವ ಪ್ರತಿಯೊಂದು ಪಾತ್ರವು ಘನಗಂಭೀರ
ಕಥೆಯ ಮೂಲ ಭಾರತದ ಅಗಾಧ ಜಾನಪದದ ಸಾಗರ
ಚಂದ್ರಸೂರ್ಯರ ಜಗಳದಲ್ಲಿ ನಲುಗಿದಿದ ಚಕೋರಿಯ
ಈ ಪರಿಯ ಸೋಜಿಗದ ಕಥೆಯ ಎಲ್ಲದರೂ ಕೇಳೀರಾ ?

ಕಾವ್ಯದ ಶೈಲಿಯ ಅಪೂರ್ವದ ಕಥೆಯಿದು
ನಾನು ಬರೆದುದನ್ನು ಅರಿಯಬಲ್ಲಿರಾದರೆ
ನೀವು ಚಕೋರಿಯನ್ನೂ ಓದಬಹುದು.

ಕಥೆಯ ಬಿಚ್ಚಿಡಲಾರೆ; ಯಕ್ಷಿಯ ಶಾಪದ ಭಯ !
ಓದಿದವನೇ ಬಲ್ಲ, ಚಕೋರಿಯ ಕಥೆಯ !

ಈ ಕಾವ್ಯವನ್ನು ವ್ರತಾಚರಣೆಯಲ್ಲಿ ಉಪವಾಸ, ಜಾಗರಣೆಗಳನ್ನು ಮಾಡುವಂತೆ, literally ಹಾಗೇ ಓದಿದ್ದೇನೆ. ಅಷ್ಟು ಚೆನ್ನಾಗಿದೆ ! ಹೋಮರ್ ನ ಒಡಿಸ್ಸಿ ಕಾವ್ಯದ ಛಾಯೆ ಕಂಡರೂ ನಮ್ಮ ಜಾನಪದ ಶೈಲಿಯದ್ದೇ ಸೊಗಡು ಹೆಚ್ಚು. ಲಾವಣಿಗಳ ಭರಪೂರ ಮಳೆ ! ನಿಜವಾಗಿಯೂ ಅದ್ಭುತ ಎನಿಸುವ ಕಥನ ಶೈಲಿ. ಎಲ್ಲೂ ಬಿಗಿಯನ್ನು ಕಳೆದುಕೊಳ್ಳದ ನವಿರಾದ, ಸೂಕ್ಷ್ಮದ ಕಥಾಹಂದರ.  ಶಿವಾಪುರ ಎಂಬ ಕಾಲ್ಪನಿಕ ಸ್ಥಳ ನಮಗೆ ಬಹಳ ಆಪ್ಯಾಯಮಾನವೆನಿಸುತ್ತದೆ. ಶಿವನ ಡಂಗುರ ಓದಿ ನಾನು ಬಿದ್ದಾಗ ಆದ ಪೆಟ್ಟು ಸ್ವಲ್ಪ ಸ್ವಲ್ಪವೇ ಮಾಯುತ್ತಿದೆ. ಖಂಡಿತಾ ಒಮ್ಮೆ ಓದಿ ನೋಡಿ. ಕಥೆ ಕಾಲ್ಪನಿಕವಾದರೂ ವಾಸ್ತವ ಮನಸ್ಸನ್ನು ನಾಟುತ್ತದೆ.


Friday, March 9, 2018

ಹೊರಳುದಾರಿ

ಪುಸ್ತಕದ ಹೆಸರು: ಹೊರಳುದಾರಿ
ಲೇಖಕರು: ತೇಜಸ್ವಿನಿ ಹೆಗಡೆ
ಪ್ರಕಾಶಕರು:ಸ್ವಸ್ತಿ ಪ್ರಕಾಶನ

ಕಾದಂಬರಿಗಳಿಗೆ  ಬಹುಮಾನ ಕೊಡುವ ಸ್ವಸ್ತಿ ಪ್ರಕಾಶನಕ್ಕೆ ಮೊದಲು ಅಭಿನಂದಿಸಬೇಕು. ಇಲ್ಲದಿದ್ದರೆ ಇಂತಹಾ ಕಾದಂಬರಿ ಓದುವ ಅವಕಾಶ ನಮಗೆ ಸಿಗುತ್ತಿರಲಿಲ್ಲ.

ಲೇಖಕಿಯೇ ಮುನ್ನುಡಿಯಲ್ಲಿ ಬರೆದುಕೊಂಡಂತೆ, ಇದು ಅವರ ಚೊಚ್ಚಲ ಕಾದಂಬರಿ. ಹೆದರಿ ಹೆದರಿ ಹೆಜ್ಜೆ ಮುಂದಿಡುತ್ತಾ ಹೋಗಿರುವುದು ಕಾದಂಬರಿಯುದ್ದಕ್ಕೂ ಕಾಣಿಸುತ್ತದೆ. ಒಂದೆರಡು ಕಡೆ ಬಿದ್ದೂ ಇದ್ದಾರೆ. ಆದರೆ ಕಡೆಯಲ್ಲಿ ಸ್ವಸಾಮರ್ಥ್ಯದಲ್ಲಿ  ಎದ್ದು ನಿಂತು ಕಾದಂಬರಿಯನ್ನು ಗೆಲ್ಲಿಸಿದ್ದಾರೆ.

ಈ ಕಾದಂಬರಿಯಲ್ಲಿ ಬಹಳ ಇಷ್ಟವಾಗುವುದು ಈಗೀಗ ಮಾಯವೇ ಆಗುತ್ತಿರುವ ಕುಟುಂಬದ ಆಪ್ತತೆ. ಅಜ್ಜ, ದೊಡ್ಡಮ್ಮ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಇವೆಲ್ಲವೂ ಕೇವಲ ಶಬ್ದಕೋಶಗಳಲ್ಲಿ ಮಾತ್ರ ಉಳಿದುಹೋಗುತ್ತಿರುವ ಈ ಕಾಲದಲ್ಲಿ, ಅದನ್ನು ಪಾತ್ರಗಳಲ್ಲಿ ಜೀವಂತವಾಗಿರುವುದು ಖುಷಿ ತರುತ್ತದೆ. ಮಲೆನಾಡಿನ ಕಡೆಯ ಕನ್ನಡ ಭಾಷೆಯ ಸೊಗಡು, ಆ ಪ್ರದೇಶದಷ್ಟೇ ಮನೋಹರವಾಗಿದೆ. ಕಥೆಯು ಮೊದಲು ನಿಧಾನಕ್ಕೆ ಸಾಗುತ್ತದೆ, ಅದು ವೇಗ ಪಡೆಯಲು ಹೆಚ್ಚು ಸಮಯ ತೆಗೆದುಕೊಂಡಿದೆ. ಇದನ್ನು ಲೇಖಕಿಯವರು ಗಮನಿಸಬೇಕು. ಇದು ಓದುಗನ ತಾಳ್ಮೆಯನ್ನು ಕೆಡಿಸುವ ಅಪಾಯವಿದೆ.

ಕಾದಂಬರಿಯ ಕಥಾ ವಸ್ತು ಹೊಸದಲ್ಲ. ನಿರೂಪಣೆ ಕೂಡಾ . ಆದರೆ ಇಲ್ಲಿ ಇಷ್ಟವಾಗುವುದು, ಕಥನ ತಂತ್ರ. ಅದಕ್ಕೆ ಅದರದ್ದೇ ಬೇರೆ ಶೈಲಿ ಇದೆ. ಕಾದಂಬರಿ ಮೆಚ್ಚುಗೆ ಪಡೆಯುವುದು ಇದಕ್ಕೇ.

ಮನಸ್ಸು ಮಾಡಿದರೆ ೩ ಗಂಟೆಗಳಲ್ಲಿ ಓದಿ ಮುಗಿಸಬಹುದಾದ ಕಾದಂಬರಿಯನ್ನೋದಲು ನಾನು ಎರಡು ದಿನ ತೆಗೆದುಕೊಂಡಿದ್ದೇನೆ. ಈ ಕಾದಂಬರಿ ಮಲೆನಾಡಿನಲ್ಲಿ ಸುತ್ತಾಡಿದ ಅನುಭವ ಕೊಡುತ್ತದೆ. ಕಥೆ ಖಂಡಿತಾ ಮನಸ್ಸಿಗೆ ನಾಟುತ್ತದೆ. ನನಗೆ ಇಲ್ಲಿ ಎಲ್ಲರಿಗಿಂತ ಇಷ್ಟವಾಗಿದ್ದು ವಿನೋದನ ಪಾತ್ರ. ಈ ಪಾತ್ರದ ವೈಶಿಷ್ಟ್ಯ ತಿಳಿಯಲು ಪುಸ್ತಕವನ್ನು ಓದಿ.

ಹಂಸಯಾನ ಬರೆಯುವ ಹೊತ್ತಿಗೆ ಲೇಖಕಿ ಬಹಳ ಜಾಗರೂಕರಾಗಿದ್ದಾರಾದ್ದರಿಂದ, ಹೊರಳುದಾರಿಗಿಂತಲೂ ಹಂಸಯಾನ ನನಗೆ ವೈಯಕ್ತಿಕವಾಗಿ ಇಷ್ಟವಾಗಿದೆ.

Tuesday, March 6, 2018

Enigmas of Karnataka

ಪುಸ್ತಕದ ಹೆಸರು:  Enigmas of Karnataka
ಲೇಖಕರು: ಎಸ್.ಶ್ಯಾಂ ಪ್ರಸಾದ್
ಪ್ರಕಾಶಕರು: ನೋಷನ್ ಪ್ರೆಸ್

ಈ ಹಳಗನ್ನಡದ ಆಸಕ್ತಿ, ನಮ್ಮ ಕನ್ನಡದ ಚರಿತ್ರೆಯ ಆಸಕ್ತಿ ನನ್ನಿಂದ ಇನ್ಯಾವ್ಯಾವ ಪುಸ್ತಕಗಳನ್ನು ಓದಿಸುತ್ತದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ, ನಮ್ಮ ಭಾಷೆ, ಊರು, ಚರಿತ್ರೆಯ ಹಿಂದೆ ಬಿದ್ದವಳಾದ ನನಗೆ ಈ ಪುಸ್ತಕ ದೊರೆತಿದ್ದು ಒಳ್ಳೆಯದಾಯಿತು. ಹೀಗೇ ಫೇಸ್ ಬುಕ್ ನಲ್ಲಿ ಈ ಪುಸ್ತಕದ ಬಗ್ಗೆ ರಿವ್ಯೂ ಓದಿದೆ. ಮುಂದೆಂದಾದರೂ ಓದೋಣವೆಂದು ಸುಮ್ಮನಿದ್ದೆ. ಮುನ್ನೋಟ ಪುಸ್ತಕದ ಮಳಿಗೆಯ ಆನ್ಲೈನ್ ಪುಸ್ತಕದ ಜಾಲತಾಣದಲ್ಲಿ ಈ ಪುಸ್ತಕ ಕಣ್ಣಿಗೆ ಬಿದ್ದ ತಕ್ಷಣವೇ ಕೊಂಡುಕೊಂಡೆ. ಮೂರೇ ದಿನದಲ್ಲಿ ಪುಸ್ತಕ ಮನೆಗೆ ತಲುಪಿತು. ಶಿಖರ ಸೂರ್ಯ ಕಾದಂಬರಿ ಓದಲು ಹೋದವಳು ಇದು ಕೈ ಸೇರಿದ್ದೇ ಇದರ ಒಳಗೆ ನುಗ್ಗಿದೆ.

ದಂತಕಥೆಗಳ ಸತ್ಯಾಸತ್ಯತೆಗಳನ್ನು ಒರೆಗೆ ಹಚ್ಚುವ ಉತ್ತಮ ಪುಸ್ತಕಗಳಲ್ಲಿ ಇದೂ ಒಂದು. ಇದರಲ್ಲಿಯ ಕೆಲವು ವಿಷಯಗಳು ಹಳಗನ್ನಡ ತರಗತಿಯಲ್ಲಿ ಚರ್ಚಿತವಾಗಿತ್ತಾದರೂ, ಕೆಲವು ವಿಷಯಗಳು ನನಗಂತೂ ಹೊಸದು. ವಿಷ್ಣುವರ್ಧನನ ಸಿಂಹ ಲಾಂಛನದಿಂದ ಹಿಡಿದು, ಬೆಂಗಳೂರಿನ ಕಡಲೆಕಾಯಿ ಪರಿಷೆ ಮತ್ತು ವೊಡೆಯರ್ ವಂಶಾವಳಿಯ ವಂಶವೃಕ್ಷದ ವರೆಗೆ ಹಲವು ಸತ್ಯಗಳನ್ನು ಬಿಚ್ಚಿಡುತ್ತಾ,  ಈ ಎನಿಗ್ಮಾ ಹಲವು ಅಧ್ಯಾಯಗಳಲ್ಲಿ ನಮ್ಮನ್ನು ಆಶ್ಚರ್ಯಪಡಿಸುತ್ತಾ ಹೋಗುತ್ತದೆ. ಇಲ್ಲಿ ನೀಡಿರುವ ಪೂರಕ ಚಿತ್ರಗಳ ಗುಣಮಟ್ಟ ಬಹಳ ಚೆನ್ನಾಗಿದೆ.  ಎಪ್ಪತ್ತೈದು ಪುಟಗಳ ಈ ಹೊತ್ತಗೆಯನ್ನು ಒಂದುವರೆ ಘಂಟೆಗಳಲ್ಲಿ ಓದಿ ಮುಗಿಸಿದೆ. ಓಘದಲ್ಲಿ ಈ ಪುಸ್ತಕ ಯಾವ ಥ್ರಿಲ್ಲರ್ ಗೂ ಕಡಿಮೆ ಇಲ್ಲ.

ಲೇಖಕರು ಸಿನಿ ಪತ್ರಕರ್ತರಾದರೂ non fiction ಪುಸ್ತಕ ಬರೆದು ನಿಜವಾಗಲೂ ತಮ್ಮನ್ನು ತಾವು ಪರೀಕ್ಷೆಗೆ ಒಡ್ಡಿಕೊಂಡಿದ್ದಾರೆ.ತಮ್ಮ ವಾದಕ್ಕೆ ಪೂರಕವಾಗಿ ಅವರು ದಾಖಲೆ ನೀಡಿರುವ ಸುಮಾರು ಪುಸ್ತಕಗಳನ್ನು ನಾನು ಓದಿದ್ದೇನೆ ಎಂಬುದು ಒಂದು ಸಮಾಧಾನಕರ ಸಂಗತಿ. ಬಹಳಷ್ಟು ಇನ್ನೂ ಓದಬೇಕಾಗಿದೆ ಎಂಬುದು ಗಮನಾರ್ಹವಾದ ಸಂಗತಿ. ಓದುಗನನ್ನು ಇಸವಿ ದಿನಾಂಕಗಳಲ್ಲಿ ಕಳೆದುಹೋಗುವಂತೆ ಮಾಡದೇ, ಘಟನಾವಳಿಗಳ ಮೂಲಕ ಸೆಳೆಯುವ ಲೇಖಕರ ತಂತ್ರಗಾರಿಕೆ ಮತ್ತು ವಿವರಣ ಶೈಲಿ ಚೆನ್ನಾಗಿದೆ. ಇಲ್ಲಿ ಅವರು ತಿಳಿಸಿರುವ ಕೆಲವು ಕಹಿಸತ್ಯವನ್ನು ಅರಗಿಸಿಕೊಳ್ಳುವ ಧೈರ್ಯ ನಮಗಿರಬೇಕು, ಅಷ್ಟೇ.

 ಈ ಪುಸ್ತಕ ನಮ್ಮನ್ನು ಮತ್ತಷ್ಟು ಕಥೆಗಳ ಹಿಂದಿನ ಸತ್ಯದ ಹುಡುಕಾಟಕ್ಕೆ ಹಚ್ಚುವುದಂತೂ ನಿಜ. ಕನ್ನಡಿಗರು ಓದಲೇ ಬೇಕಾದ ಹಲವು ಆಂಗ್ಲ ಪುಸ್ತಕಗಳಲ್ಲಿ ಇದೂ ಒಂದು.

Thursday, March 1, 2018

ಅಪೂರ್ವ ಹಂಸಯಾನ

ಪುಸ್ತಕದ ಹೆಸರು : ಹಂಸಯಾನ
ಲೇಖಕರು: ತೇಜಸ್ವಿನಿ ಹೆಗಡೆ
ಪ್ರಕಾಶಕರು: ಜಯಶ್ರೀ ಪ್ರಕಾಶನ

ಥ್ರಿಲ್ಲರ್ ಕಾದಂಬರಿಗಳ ಗುಣವೇ ರೋಚಕತೆ. ಅನಿರೀಕ್ಷಿತ ತಿರುವುಗಳು ಭರಪೂರ ತುಂಬಿದ್ದು, ಸಣ್ಣ ಸಣ್ಣಕೊಂಡಿಗಳು ಎಲ್ಲ ಎಲ್ಲೆಲ್ಲೋ ಚೆಲ್ಲಾಪಿಲ್ಲಿ ಆಗಿ, ಓದುಗ ತಾನು ಕಾದಂಬರಿಯನ್ನು ಓದುತ್ತಾ ತನ್ನದೇ ಲೆಕ್ಕಾಚಾರಗಳಲ್ಲಿ ಆ ಕೊಂಡಿಗಳನ್ನೆಲ್ಲಾ ಸೇರಿಸಲು ಯತ್ನಿಸುತ್ತಿರುವಾಗ ಲೇಖಕ ಯಾವುದೋ ಪುಟದಲ್ಲಿ ಹೊಸ ತಿರುವೊಂದನ್ನಿಟ್ಟು ಓದುಗನ ಲೆಕ್ಕಾಚಾರವನ್ನೆಲ್ಲಾ ಬುಡಮೇಲಾಗಿಸಿ, ಕೊಂಡಿಗಳನ್ನೆಲ್ಲಾ ಮತ್ತೆ ಕೆಡಿಸಿಬಿಡುತ್ತಾನೆ. ಥ್ರಿಲ್ ಇರುವುದು ಅಲ್ಲಿಯೇ. ಲೇಖಕರನನ್ನು outwit ಮಾಡಲು ಓದುಗ ಕಾತರನಾಗಿರುತ್ತಾನೆ, ಈ ಕಡೆ ಓದುಗನನ್ನು outsmart ಮಾಡಲು ಲೇಖಕ ಹವಣಿಸುತ್ತಿರುತ್ತಾನೆ. ಕತ್ತಿಯಲುಗಿನ ನಡೆಯಂತೆ ಇರುವ ಈ ಸಾಹಿತ್ಯಪ್ರಕಾರದಲ್ಲಿ ಒಂದು ಚೂರು ಎಡವಿದರೂ ಕಾದಂಬರಿಯಲ್ಲಿ ರೋಚಕತೆಯ ಸಾವಾಗುತ್ತದೆ. ತೇಜಸ್ವಿನಿ ಹೆಗಡೆಯವರು ಈ ಕತ್ತಿಯಂಚಿನ ನಡುಗೆಯನ್ನು ಬಹಳ ಎಚ್ಚರಿಕೆಯಿಂದ ನಡೆದು ದಡ ಸೇರಿ, ಒಂದು ಅದ್ಭುತ ಕಾದಂಬರಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಕನ್ನಡದಲ್ಲಿ ಥ್ರಿಲ್ಲರ್ ಕಾದಂಬರಿ ಬರೆದ ಪ್ರಥಮ ಮಹಿಳೆ ಇವರು ಅನಿಸುತ್ತದೆ. ಆ ಮಟ್ಟಿಗೆ ಇದೊಂದು ದಾಖಲೆ.

ನನ್ನ ಓದಿನ ಮಿತಿಯಲ್ಲಿ, ನಾನು ಥ್ರಿಲ್ಲರ್ ಕಾದಂಬರಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಂಡಿದ್ದೇನೆ. ಒಂದು ಪತ್ತೆದಾರಿ ಕಥೆಗಳು, ಇನ್ನೊಂದು ಸಸ್ಪೆನ್ಸ್ ಥ್ರಿಲ್ಲರ್ಸ್. ಕೊಲೆ ಮಾಡಿದವನು/ ಕದ್ದವನು ಯಾರು ಎಂಬುದು ಸಸ್ಪೆನ್ಸ್ ನಲ್ಲಿ ಇರುತ್ತದೆಯಾದರೂ, ಡಿಟೆಕ್ಟಿವ್ ಕಥೆಗಳಿಗೂ, ಸಸ್ಪೆನ್ಸ್ ಥ್ರಿಲ್ಲರ್ಸ್ ಗೂ ಮೂಲ ಕಥನದ ರೀತಿಯಲ್ಲೇ ವ್ಯತ್ಯಾಸವನ್ನು ಗುರುತಿಸಬಹುದು. ತೇಜಸ್ವಿನಿಯವರು, ಡಿಟೆಕ್ಟಿವ್ ಕಥೆಗೆ ಸಸ್ಪೆನ್ಸ್ ಬೆರೆಸುವುದಲ್ಲದೆ, ಅಧ್ಯಾತ್ಮ ಮತ್ತು ಭಾವನೆಗಳನ್ನು ಬೆರೆಸಿ ಬೇರೆಯದ್ದೇ ರೀತಿಯ ವಿಶಿಷ್ಟ ಸ್ವಾದ ನೀಡುವ ಪಾಕವೊಂದನ್ನು ಹೊರತೆಗೆದಿದ್ದಾರೆ. ಲೇಖಕಿ ಹೆದರಬೇಕಿಲ್ಲ, ಈ ಹೊಸರೀತಿಯ ಪಾಕ ಸ್ವಾದಿಷ್ಟವಾಗಿದೆ.

ಸಾಮಾನ್ಯವಾಗಿ ಭಾವನಾಶೂನ್ಯ ಮತ್ತು ರೋಚಚಕಪೂರ್ಣ ಥ್ರಿಲ್ಲರ್ ಗಳಿಗೆ ಒಗ್ಗಿಕೊಂಡ ಓದುಗನ ಮನಸ್ಥಿತಿ, ಈ ಕಾದಂಬರಿಯನ್ನೋದಲು ಸ್ವಲ್ಪ ಹದಗೊಳ್ಳಬೇಕಾಗುತ್ತದೆ. ಲೇಖಕಿ ಭರಪೂರ ಅರವತ್ತು ಪುಟಗಳನ್ನು ನಮ್ಮ ಬುದ್ಧಿಯನ್ನು ಹದಗೊಳಿಸಲಿಕ್ಕೇ ಮೀಸಲಿಟ್ಟಿದ್ದಾರೆ. ಅವರ ಜಾಣ್ಮೆ ಮೆಚ್ಚುವಂಥದ್ದು. ಆದರೆ, ಅರವತ್ತು ಪುಟಗಳಷ್ಟು ಕಾಯಿಸಿ, ಕಥನ ಪ್ರಾರಂಭವಾಗಲು  ನಮ್ಮ ತಾಳ್ಮೆಯನ್ನು ಅವರು ಅಷ್ಟೋಂದು ಪರೀಕ್ಷಿಸಬಾರದಿತ್ತು. ಬೇರೆ ಬೇರೆ ಘಟನೆಗಳನ್ನಾದರೂ ನೀಡಿ ಸ್ವಲ್ಪ ಕಥೆಯನ್ನು ಅಲ್ಲಿ ವೇಗಗೊಳಿಸಬಹುದಿತ್ತು ಎಂದು ನನಗನಿಸಿತು. ಈ ಮಾತನ್ನು ಈ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಕಾದಂಬರಿಕಾರ ಡಾ|| ಕೆ.ಎನ್.ಗಣೇಶಯ್ಯ ಸಹ ಹೇಳಿದ್ದರು. ಅದನ್ನು ನಾನೂ ಅನುಮೋದಿಸುತ್ತೇನೆ.

ಕಥೆ ಬಗ್ಗೆ ಹೇಳಿದರೆ ಕೊಲೆಯಾಗಿ ಹೋಗುತ್ತೇನೆ ಆದ್ದರಿಂದ....ಅದರ ಬಗ್ಗೆ ಸೊಲ್ಲೆತ್ತುವುದಿಲ್ಲ. ಕಥೆಯ ಧನಾತ್ಮಕ ಅಂಶಗಳು ಹಲವಾರಿದೆ. ಅದನ್ನು ಒಮ್ಮೆ ನೋಡಿಬಿಡೋಣ:

ಗಣೇಶಯ್ಯ ಸರ್ ಹೇಳಿದಂತೆ ಥ್ರಿಲ್ಲರ್ ಕಾದಂಬರಿಗಳಲ್ಲಿ ಈ ಕಾದಂಬರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಏಕೆಂದರೆ ಕಥಾ ಹಂದರ ಹೊಸತಲ್ಲವೆಂದು ಅಂತ್ಯದಲ್ಲಿ ಅನಿಸಿದರು, ಅದರ ನಿರೂಪಣೆಯಲ್ಲಿ ಹೊಸತನ ಇದೆ.Fact ಗಳನ್ನು ಬಹಳ ಎಚ್ಚರದಿಂದ ಸಂಗ್ರಹಿಸಿ, ಹೇರಳವಾಗಿ ಬಳಸಿಕೊಂಡಿದ್ದಾರೆ ಸಹ. fact ಗಳು ಹೇರಿಕೆ ಅನ್ನಿಸದೇ ಪಾತ್ರಗಳ ಬಾಯಲ್ಲಿ ಸಂಭಾಷಣೆಯಂತೆ ಬಂದಿರುವುದು ಕಾದಂಬರಿಯ ಹೈಲೈಟ್ ಗಳಲ್ಲಿ ಒಂದು. ನನ್ನ ಓದಿನ ಮಿತಿಯಲ್ಲಿ, ಭಾವಜೀವಿ ಕಥಾ ನಾಯಕಿ ಉಳ್ಳ ಪ್ರಥಮ ಥ್ರಿಲ್ಲರ್ ಕಾದಂಬರಿ ಇದು. ಆಂಗ್ಲದ ಬಹುತೇಕ ಥ್ರಿಲ್ಲರ್ ಗಳು, ಪತ್ತೆದಾರಿ ಕಾದಂಬರಿಗಳು ಬಹಳ ನಿರ್ಭಾವುಕ. ಕೊಲೆಗಳು ನಡೆಯುತ್ತಿರುತ್ತವೆ. ಭಯ ಓದುಗನಿಗೆ ಹೊರತು ನಾಯಕ/ನಾಯಕಿಯರಿಗಲ್ಲ. ಅಲ್ಲಿ ಅಬ್ಬಬ್ಬಾ ಅಂದರೆ ದ್ವೇಷ, ರೋಷ ಕಾಮ ಮತ್ತು ಪ್ರೇಮಗಳನ್ನು ಪಾತ್ರಗಳು ತಮ್ಮೊಳಗೆ ಸೆಳೆದುಕೊಳ್ಳಬಹುದು. ಅಲ್ಲಿನ ಕಥಾ ನಾಯಕ/ ನಾಯಕಿಯರು ಭಾವಾವೇಷಕ್ಕೆ ಒಳಗಾದ ಸಂದರ್ಭಗಳು ಕಡಿಮೆ. ಈ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಇಲ್ಲಿ, ನಾಯಕಿಗೆ ಸುಮಾರು ಬಾರಿ ಅಳು ಬರುತ್ತದೆ. ಅವಳು ತನ್ನನ್ನು ಸಂಯಮಕ್ಕೆ ತಂದುಕೊಳ್ಳಲು ಹಲವಾರು ಬಾರಿ ಧ್ಯಾನಕ್ಕೆ ಮೊರೆ ಹೋಗುತ್ತಾಳೆ. ಹಲವಾರು ಬಾರಿ ಕೆಟ್ಟ ಕನಸು ಕಂಡು ಭಯಗೊಂಡು ಎಚ್ಚರವಾಗುತ್ತಾಳೆ. ಈ ಕಥಾ ಹಂದರಕ್ಕೆ ಇಂಥದ್ದೇ ನಾಯಕಿಯ ಅವಶ್ಯಕತೆ ಇರುವುದರಿಂದ ಇದನ್ನು ಧನಾತ್ಮಕ ಅಂಶ ಎಂದು ನೋಡಬಾರದು. ಅದಕ್ಕೆ ನಾನು ಹೇಳಿದ್ದು, ಈ ಕಥೆಯ ನೇಯ್ಗೆ ವಿಶೇಷವಾಗಿದೆ ಎಂದು.

ಸಂಪೂರ್ಣ ಕಾಲ್ಪನಿಕ ಕಥಾ ಚಿತ್ರಣವನ್ನು ಕೊಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಬೆಟ್ಟದಜ್ಜ ನಂಥಾ ಒಂದು ವ್ಯಕ್ತಿಯ ಚಿತ್ರಣ ಈ ಕಾದಂಬರಿಯ ಕೇಂದ್ರಬಿಂದು. ಅದೇ ಈ ಕಾದಂಬರಿಯ ಜೀವಾಳ ಕೂಡ. ಈ ಕಲ್ಪನೆ ನಿಜವಾಗಲೂ ಸಮರ್ಪಕವಾಗಿ ಮೂಡಿಬಂದಿದೆ. ಅಧ್ಯಾತ್ಮದ ನಿಜ ಆಯಾಮದ ಪ್ರಾಮಾಣಿಕ ನಿರೂಪಣೆ, ಹೊಳಹುಗಳಿದೆ. ಈ ಭಾಗ ಅದ್ಭುತವಾಗಿ ಮೂಡಿಬಂದಿದೆ.

ಹಂಸದನಡಿಗೆಯ ಬಗ್ಗೆ ಲೇಖಕಿ ಒಂದುಕಡೆ ವಿವರಿಸುತ್ತಾರೆ. ಈ ಕಾದಂಬರಿಯೂ ಹಾಗೇ ನಡೆದುಬಂದಿದೆ. ಅದು ಹೇಗೆ ಎಂದು ತಿಳಿದುಕೊಳ್ಳಲು ನೀವು ಕಾದಂಬರಿ ಓದಬೇಕಾಗುತ್ತದೆ. ಹಂಸ ತನ್ನ ಆಧ್ಯಾತ್ಮದ ಅರ್ಥದಿಂದಲೂ ಈ ಕಾದಂಬರಿಯಲ್ಲಿ ಸಾಕಾರಗೊಂಡಿದೆ . ಜಟಿಲಾರ್ಥಗಳುಳ್ಳ ಹಂಸತತ್ವವನ್ನು ಸರಳವಾಗಿ ಹೇಳಬಯಸುವ ಲೇಖಕಿಯ ಪ್ರಯತ್ನ ಶ್ಲಾಘನೀಯ.

ಗಣೇಶಯ್ಯ ಸರ್ ಒಂದು ಮಾತು ಹೇಳಿದ್ದರು. ತೇಜಸ್ವಿನಿ ಅವರು  smart readers ಅನ್ನು  outsmart ಮಾಡುವಲ್ಲಿ ತಕ್ಕಮಟ್ಟಿಗೆ ಗೆದ್ದಿದ್ದಾರೆ ಅಂತ. ಇದನ್ನು ನಾನು ತಕ್ಕಮಟ್ಟಿಗಷ್ಟೇ ಒಪ್ಪಬಲ್ಲೆ. ಪೂರ್ತಿ ಒಪ್ಪಲಾರೆ. ಅದಕ್ಕೆ ಕಾರಣ ನಾನು ಓದುವಾಗ ನನಗೆ ತೋಚಿದ ಕೆಲವು ಪ್ರಶ್ನೆಗಳು. ಇದಕ್ಕೆ ಲೇಖಕಿಯವರು ಉತ್ತರಿಸಿದರೆ ಆಗ ಪ್ರಾಯಶಃ ನಾನು ಒಪ್ಪಬಹುದು.

೧) ಕಥಾ ನಾಯಕಿಯ detective course ಬರಿ ಕ್ಯಾಮೆರಾ ಡಿಟೆಕ್ಟರ್ ಗಳನ್ನು ಕಂಡುಹಿಡಿಯುವಲ್ಲಿ ಸೀಮಿತವಾಗಿ ಹೋಗುತ್ತದೆ ಯಾಕೆ ? ಆಕೆಯನ್ನು trap ಮಾಡಬಹುದು ಎಂಬ ಮುಂದಾಲೋಚನೆ ಅವಳಿಗೆ ಇರಬೇಕಿತ್ತು. ಇದ್ದಿದ್ದರೆ ಕಥೆಗೆ ಮತ್ತಷ್ಟು ರೋಚಕತೆ ಇರುತ್ತಿತ್ತು.

೨) ವಿಲನ್ ಗಳ ಬಗ್ಗೆ ಅವಳಿಗೆ ಪೂರ್ಣ ಮಾಹಿತಿ ಮೊದಲೇ ದೊರಕಿಸಿಕೊಳ್ಳುವ ತಂತ್ರಗಳನ್ನು ಆಕೆ ಮಾಡಬಹುದಿತ್ತು. ಅವಳು ಅದಕ್ಕೆ ಖರ್ಚುಮಾಡುವ ಬುದ್ಧಿ ಮತ್ತು ಉಪಯೋಗಿಸುವ ತಂತ್ರಜ್ಞಾನದಲ್ಲಿ ಕಲ್ಪನೆಗೆ ವಿಪುಲ ಅವಕಾಶಗಳಿದ್ದವು. They have remained unused.

೩) ನಚಿಕೇತನ ಬಗ್ಗೆ ಆಕೆ ಏನೂ ಪತ್ತೆದಾರಿ ಮಾಡದಿರುವುದು ! ಯಾಕೆ ?!

೪) ರಣಹದ್ದುಗಳ ಕನಸಿನ ಭಾಗವನ್ನು ನಾನು ಎಲ್ಲೂ correlate ಮಾಡಲಾಗಲಿಲ್ಲ. ಕಥೆಯಲ್ಲಿ ಇದರ ಔಚಿತ್ಯವನ್ನು ಲೇಖಕಿಯವರು ತಿಳಿಸಬೇಕು.

ಆಕೆ ಲೇಖಕಿಯ ಸೋಗಿನಲ್ಲಿ ಬಂದಿರುವಳಾದರೂ,  ತನ್ನ ನಿಜ ಕಾರ್ಯ ಸಾಧನೆಯಲ್ಲಿ ಭಾವನೆಗೆ ಹೆಚ್ಚು ಒತ್ತು ನೀಡಿರುವಳಾದರೂ, ತನ್ನ ನಿಜರೂಪ ತಿಳಿಸದೇ, ಜಾಗರೂಕಳಾಗಿ ಎಲ್ಲಾ ಮಾಡಿದರೂ, ನಚಿಕೇತ ಮತ್ತು ಸುಮಾ ರ ಹಿನ್ನೆಲೆಯನ್ನು ಪತ್ತೆ ಮಾಡುವಲ್ಲಿ ತಲೆಗೆ ಹೆಚ್ಚು ಕೆಲಸ ನೀಡಬಹುದಿತ್ತು ಎಂದೆನಿಸಿತು.

ಪುಸ್ತಕ ನಿಜಕ್ಕೂ ಓದುಗನ ಮನಸ್ಸು ಗೆಲ್ಲುತ್ತದೆ. ಹಂಸಯಾನ ಖುಷಿ, ತೃಪ್ತಿ ಎರಡೂ ನೀಡುತ್ತದೆ. Atleast, ನನಗಂತೂ ಎರಡೂ ದೊರಕಿದೆ.