Tuesday, July 24, 2018

ದುಡ್ಡು ದುಡ್ಡು

ಪುಸ್ತಕದ ಹೆಸರು: ದುಡ್ಡು ದುಡ್ಡು
ಲೇಖಕರು: ಮೂಲ: ಯಂಡಮೂರಿ ವೀರೇಂದ್ರನಾಥ್
ಅನುವಾದ : ವಂಶಿ

ಈ ಪುಸ್ತಕ ಓದಿದ ತಕ್ಷಣ ನಾನು "ಅದ್ಭುತ " ಎಂದು ಉದ್ಗರಿಸಿದೆ. ಯಂಡಮೂರಿಯವರ ಪಾತ್ರ  ಸೃಷ್ಟಿ, ಕಥನ ಶೈಲಿ, ಕಾದಂಬರಿಗೆ ಅವರ ವಸ್ತುವಿನ ಆಯ್ಕೆ, ಕಾದಂಬರಿಗೆ ಬೇಕಾದ ವಿಷಯಗಳ ಬಗ್ಗೆ ಸಂಶೋಧನೆ, ಆಳ, ಅರಿವು, ಓದುಗನ ಮನಸ್ಥಿತಿ ಹೇಗಿರಬಹುದು, ಹೇಗೆ ಆಗಬಹುದು, ಅವರ ಕಾದಂಬರಿ ಏನು ಸಂದೇಶ ದಾಟಿಸಬೇಕು, ಇವೆಲ್ಲದರ ಬಗ್ಗೆ ಅವರು ವಹಿಸಿರುವ ಆಸ್ಥೆ ಎಚ್ಚರಿಕೆಗಳೇ ಅವರನ್ನು ನಂಬರ್ ವನ್ ಕಾದಂಬರಿಕಾರರನ್ನಾಗಿಸಿದೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.

what a book ! What a book ! What a book !! ನಿಜಕ್ಕೂ ಪ್ರತಿಪುಟದಲ್ಲೂ ಕುತೂಹಲ ಕೆರಳಿಸಿದ ಪುಸ್ತಕ ಇದು. ಈ ಕಾದಂಬರಿಯ ಮುಖ್ಯ ಪಾತ್ರದ ಹೆಸರು ಗಾಂಧಿ. ಗಾಂಧಿ ಭಾರತದ ಕರೆನ್ಸಿಯ ಪ್ರತಿ ನೋಟಿನ ಮೇಲೂ ಇದ್ದಾನೆ. ಈ ಗಾಂಧಿ ಎಂಬ ಹೆಸರನ್ನ ದುಡ್ಡೇ ಇಲ್ಲದ ನಿರ್ಗತಿಕನಾದ ಕಥಾನಾಯಕನ ಹೆಸರಾಗಿ ಅವರು ಆರಿಸಿದ್ದು ಬಹಳ ಮಾರ್ಮಿಕವಾಗಿದೆ. ಈ ಗಾಂಧಿ ದುಡ್ಡು ಮಾಡುವ  ಒಂದ್ಪು ಅಪೂರ್ವ ಪಂದ್ಯದ ರೋಚಕ ಕಥೆ ಈ ಕಾದಂಬರಿ.

ಒಂದೇ ಒಂದು ಸಾಮ್ಯ ಕಾಣಿಸಿತು, ಕಪ್ಪಂಚು ಬಿಳಿಸೀರೆ ಮತ್ತು ಈ ಪುಸ್ತಕದಲ್ಲಿ. ಎರಡರಲ್ಲೂ  ಒಂದು ಹೆಣ್ಣು  ಪಾತ್ರ ಕಾಣದಂತೆ ಕೆಲಸ ಮಾಡುತ್ತಿರುತ್ತದೆ, ಮತ್ತು ಅದು ಕಥಾನಾಯಕನಿಗಿಂತ ಹೆಚ್ಚು ಬುದ್ಧಿವಂತ ಹೆಣ್ಣಾಗಿರುತ್ತದೆ. ಮತ್ತು, ಅದೇ ಹೆಣ್ಣಿಗೆ ಈ ನಾಯಕನಿಂದ ಅಪಾರವಾದ ಅನ್ಯಾಯ ಆಗಿರುತ್ತದೆ. ಅದು ಬಿಟ್ಟರೆ ಎರಡೂ ಕಾದಂಬರಿಯ ಕಥಾ ಹಂದರ ಸಂಪೂರ್ಣ ಬೇರೆ.

ಗಾಂಧಿಯು ದುಡ್ಡು ಸಂಪಾದಿಸಲು ಮಾಡುವ ಪ್ಲಾನುಗಳಲ್ಲಿ ಒಂದನ್ನಾದರೂ ಮಾಡಿಯೇ ನೋಡಬೇಕು ಅಂತ ಒಮ್ಮೆ ಆಸೆಯಾಯಿತಾದರೂ, ಇದು ಕಾದಂಬರಿಯಲ್ಲ, ಜೀವನ ಅಂತ ನೆನಪಾಗಿ ಸುಮ್ಮನಾಗಬೇಕಾಯಿತು. ಮಿಕ್ಕೆಲ್ಲದನ್ನು ಹೇಳಿ ಕಾದಂಬರಿಯ ಓದಿನ ಸುಖವನ್ನು ಹಾಳು ಮಾಡಲಾರೆ. ಖಂಡಿತಾ ಓದಬೇಕಾದ ಪುಸ್ತಕ, ಮತ್ತೂ ಮತ್ತೂ ಓದಿಸಿಕೊಳ್ಳುವ ಪುಸ್ತಕ.

Monday, July 16, 2018

ಶಿಖರಸೂರ್ಯ

ಪುಸ್ತಕದ ಹೆಸರು: ಶಿಖರಸೂರ್ಯ
ಲೇಖಕರು: ಚಂದ್ರಶೇಖರ ಕಂಬಾರ 
ಪ್ರಕಾಶಕರು: ಅಂಕಿತ ಪುಸ್ತಕ 

 " ಗಣಪತಿ ಮದುವೆಗೆ  ನೂರೆಂಟು ವಿಘ್ನ" . ಮುಂದೆ ನಾನು ಹುಟ್ಟಿ ಈ ಗಾದೆಯನ್ನು ಒಂದು ಕೋಟಿ  ಸರ್ತಿ ಬಳಸುತ್ತೇನೆ ಎಂದು ತಿಳಿದೇ ಹಿರಿಯರು ಈ ಗಾದೆಯನ್ನು ಬಹಳ ಹಿಂದೆಯೇ  ಮಾಡಿಟ್ಟು ಹೋಗಿದ್ದಾರೆ ಅಂತ ಅನಿಸಿದೆ. ಈ ಪುಸ್ತಕದ ಓದಿನ ವಿಷಯದಲ್ಲಿ ಈ ಗಾದೆ ನೂರು ಪ್ರತಿಶತ ಸತ್ಯ. 
ಮೊದಲ ನೂರಾ ಮೂರು  ವಿಘ್ನಗಳು , ಕಾದಂಬರಿ ತರಿಸಿದ ತಕ್ಷಣ ನಾನು ಓಡಲಾರದೆ ಮೂರು  ವರ್ಷ ಸುಮ್ಮನೆ ಇಟ್ಟದ್ದು. 
 ನೂರಾನಾಲ್ಕು: ಓದುವಾಗ ಈ ಕಾದಂಬರಿ ಗೆ ಮೊದಲು ಚಕೋರಿ ಓದಬೇಕು ಎಂದು ಗೊತ್ತಾಗಿದ್ದು. 
ನೂರಾ ಐದು : ಚಕೋರಿ ಪುಸ್ತಕ ಕೈಗೆ ಸಿಗಲು ಒಂದು ವಾರ ತಡವಾಗಿದ್ದು. 
ನೂರಾ ಆರು : ಚಕೋರಿ ಮುಗಿಸಿ ಶಿಖರ ಸೂರ್ಯ ಪ್ರಾರಂಭಿಸಿ ಅರ್ಧ ಮುಗಿಸುವ ಹೊತ್ತಿಗೆ ಹಳಗನ್ನಡ ಎಕ್ಸಾಂ ಅನೌನ್ಸ್ ಆಗಿದ್ದು. 
ನೂರಾ ಏಳು: ಹಳಗನ್ನಡ ಪರೀಕ್ಷೆ ಮುಗಿಯುವ ಹೊತ್ತಿಗೆ ನನಗೆ ಕಪ್ಪಂಚು ಬಿಳಿಸೀರೆ ಕಾದಂಬರಿ ಸಿಕ್ಕಿದ್ದು !
ನೂರಾ ಎಂಟು: ಕಪ್ಪಂಚು ಬಿಳಿಸೀರೆ ಮುಗಿಸುವ ಹೊತ್ತಿಗೆ ಮಧುವನ ಸಿಕ್ಕಿದ್ದು. 

ಹೀಗೆ ಹೇಗೋ ಆಗಿ ಕಡೆಗೆ ಒಂದು ದಿನ  ದೃಢ ನಿಶ್ಚಯ ಮಾಡಿ, ಕಾದಂಬರಿ ಹಿಡಿದು ಕುಳಿತು ಒಂದೇ ಗುಕ್ಕಿಗೆ ಓದಿ ಮುಗಿಸಿದ್ದು. ಕಂಬಾರರ ನಾಲ್ಕು ಕಾದಂಬರಿಗಳನ್ನು ಸತತವಾಗಿ ಓದಲಾರಂಭಿಸಿದ ಮೇಲೆ ಅವರ ಬರಹ ಶೈಲಿ ಮತ್ತು ಯೋಚನಾ ಲಹರಿಗಳು ತಕ್ಕಮಟ್ಟಿಗೆ ಅರ್ಥವಾಗತೊಡಗಿತು. ಶಿಖರಸೂರ್ಯದಲ್ಲಿ ಅವರ ಕಥನ ಶಕ್ತಿಯ ವಿಶ್ವರೂಪ ದರ್ಶನ ಆಯಿತು. 

ಕಾದಂಬರಿ ಸಂಪೂರ್ಣವಾಗಿ ಕಾಲ್ಪನಿಕವಾದರೂ, ಅದರ ಮೂಲ ಜಾನಪದದಲ್ಲಿ ಜೀವಂತವಾಗಿರುವ ನಾಗಾರ್ಜುನನ ಕಥೆ.
ಶಿಖರಸೂರ್ಯ  ಎಂಬುದು ಒಂದು ಕಾಲ್ಪನಿಕ ಪಾತ್ರ. ಚಕೋರಿಯಲ್ಲಿ ಚಿನ್ನಮುತ್ತ ಎಂಬ ಪಾತ್ರದ ಮುಂದುವರೆದ ಭಾಗವಾಗಿ ಚಿನ್ನಮುತ್ತ ಶಿಖರಸೂರ್ಯನಾಗುತ್ತಾನೆ. ಚಿನ್ನಮುತ್ತ ಶಿಖರಸೂರ್ಯನಾಗಲು ತೆಗೆದುಕೊಳ್ಳುವ ಸಮಯ ಅತ್ಯಲ್ಪ ಶ್ರಮ ಬಹಳ. ಅನೇಕ ಕುಯುಕ್ತಿಗಳನ್ನು ಬಳಸಿ ತಾನು ವಿಷವಿದ್ಯೆಯನ್ನು ಕಲಿಯುತ್ತಾನೆ. . ಶಿಖರ ಸೂರ್ಯನಾದ ಮೇಲೆ ಅವನ ಹೆಸರಲ್ಲಷ್ಟೇ ಅಲ್ಲ, ವ್ಯಕ್ತಿತ್ವದಲ್ಲೂ ಬಹಳ ಬದಲಾವಣೆಗಳಾಗುತ್ತವೆ.  ಸೇಡು, ಹಠ ಮತ್ತು ಮಹತ್ವಾಕಾಂಕ್ಷೆ ಎನ್ನುವುದು ಮನುಷ್ಯನನ್ನು ಏನೆಲ್ಲಾ ಮಾಡಬಲ್ಲದು, ಮತ್ತು ಏನೇನೆಲ್ಲಾ ಮಾಡಿಸಬಲ್ಲದು ಎಂಬುದಕ್ಕೆ ಕನಕಪುರಿ ಸಾಮ್ರಾಜ್ಯ ಮತ್ತು ಶಿಖರ ಸೂರ್ಯ ಸಾಕ್ಷಿಯಾದರೆ, ಒಳ್ಳೆತನ ಮನುಷ್ಯನನ್ನು ಹೇಗೆ ಮುನ್ನೆಡೆಸುತ್ತದೆ ಎನ್ನುವುದಕ್ಕೆ ಶಿವಾಪುರ, ಶಿವಪಾದ, ನಿನ್ನಡಿ,ಮುದ್ದುಗೌರಿ ಮತ್ತು ರವಿಕೀರ್ತಿ ಸಾಕ್ಷಿಯಾಗುತ್ತಾರೆ 

ಈ ಕಾದಂಬರಿಯಲ್ಲಿ ನಮ್ಮನ್ನು ಬಹಳವಾಗಿ ಕಾಡುವ ಪಾತ್ರ ಶಿವಪಾದ , ಚಂಡೀದಾಸ ಮತ್ತು ಮುದ್ದುಗೌರಿಯದು. ವಿದ್ಯುಲ್ಲತೆ ಕೂಡಾ ಮನಸ್ಸನ್ನು ಬಹಳಕಾಲ ಆವರಿಸಿರುತ್ತಾಳೆ. ಮಹಾರಾಣಿಯ ಪಾತ್ರ ಸ್ವಲ್ಪ ಎಳೆದಂತೆ ಅನಿಸುತ್ತದೆ. ಶಿಖರ ಸೂರ್ಯ ಮತ್ತು ಅವಳ ಭೇಟಿಯ ಆ ಪ್ರಸಂಗದ ಅಗತ್ಯವಿರಲಿಲ್ಲ ಎಂದು ನನ್ನ ಅಭಿಪ್ರಾಯ. ಛಾಯಾದೇವಿ ಮತ್ತು ಚಿಕ್ಕಮ್ಮಣ್ಣಿಯರ ಅಸಹಾಯಕತೆ ಸ್ವಲ್ಪ ಜಿಗುಪ್ಸೆ ತರಿಸುತ್ತದೆ. 

ಕಥೆಯ ಓಘ ಪೂರ್ವಾರ್ಧದಲ್ಲಿ ನಮ್ಮನ್ನು ಎಡೆಬಿಡದಂತೆ ಓದಿಸಿಕೊಂಡು ಹೋಗುತ್ತದೆ, ಉತ್ತರಾರ್ಧ ಸ್ವಲ್ಪ ಹಿಡಿ ತಪ್ಪಿದೆ. ಇದು ಲೇಖಕರಿಗೂ ಪ್ರಾಯಶ: ಅರಿವಾಗಿ ಅಂತ್ಯದಲ್ಲಿ ಬಿಗಿಯನ್ನು ಮತ್ತೆ ತಂದಿದ್ದಾರೆ. ಕಾದಂಬರಿಯ ಅಂತ್ಯ ಸ್ವಲ್ಪ predictable ಆದರೂ ಅದನ್ನು ಹೇಳಿರುವ ರೀತಿ ವಿಶೇಷವಾಗಿದೆ. ಕಾಲ್ಪನಿಕ ಪಾತ್ರದ ಅಂತ್ಯವನ್ನು ಓದುಗರ ಕಲ್ಪನೆಗೆ ಬಿಟ್ಟದ್ದು ಸ್ವಲ್ಪ ಇಷ್ಟ ಆಯಿತು ನನಗೆ.

ಇನ್ನು ಕಂಬಾರರ ಕಥನ ಶೈಲಿಯ ಬಗ್ಗೆ ನಾನು ಏನು ತಿಳಿದೆ  ಅನ್ನುವುದರ ಬಗ್ಗೆ ಸ್ವಲ್ಪ ಬರೆಯಬೇಕು. ಇದು ನಾನು ಓದುತ್ತಿರುವ ಕಂಬಾರರ ಮೂರನೆಯ ಕಾದಂಬರಿ. ಎಲ್ಲಾ ಕಾದಂಬರಿಗಳ ಮೂಲಸ್ಥಾನ ಶಿವಾಪುರ. ಧರ್ಮದ ಸೆಲೆ ಶಿವಪಾದ. ಎಲ್ಲವು ಅವನ ಕರುಣೆ. ಮಾತೃ ಸಂಸ್ಕೃತಿ ಪ್ರಧಾನ ವ್ಯವಸ್ಥೆ ವಿಜೃಂಭಿಸುತ್ತದೆ. ಪ್ರಕೃತಿಗೆ ಮಾನವ ಅಭಿವೃದ್ಧಿಯ ಹೆಸರಿನಲ್ಲಿ ನೀಡುತ್ತಿರುವ ಹಿಂಸೆಯನ್ನು ಕಂಬಾರರು ಬಹಳ ವಿಶಿಷ್ಟ ರೀತಿಯಲ್ಲಿ ಹೇಳುತ್ತಾ ಸಾಗುತ್ತಾರೆ. ಇದು ಒಂಥರಾ ಆಧುನಿಕ ಸಮಸ್ಯೆಯನ್ನು ಫೇರಿಟೇಲ್ ರೀತಿಯಲ್ಲಿ ಹೇಳಿದ ಹಾಗಿರುತ್ತದೆ. ಶಿವನ ಡಂಗುರ ಕಾದಂಬರಿಯಲ್ಲಿ  globalisation ವಸ್ತುವಾದರೆ, ಚಕೋರಿಯಲ್ಲಿ ಸಂಗೀತಗಾರನ fantasy ಅವನಿಗೆ ಹೇಗೆ ಮಾರಕವಾಗುತ್ತದೆ ಎಂಬುದರ ಚಿತ್ರಣವಿದೆ. ಶಿಖರಸೂರ್ಯ alchemist ಒಬ್ಬನ ಕಥೆ. ಹಾಗಾಗಿ, ಕಂಬಾರರ ಕಥಾ canvas ಬೇರೆಯಾದರೂ ಪಾತ್ರಗಳು ಸರಿಸುಮಾರು ಒಂದೇ. (ನಾನು ಓದಿರುವ ಮೂರೂ ಕಾದಂಬರಿಗಳ ಬಗ್ಗೆ ಹೇಳುತ್ತಿರುವುದು), ಶಿಖರ ಸೂರ್ಯ ಕಾದಂಬರಿಯ ಮುನ್ನುಡಿ ನನಗೆ ಒಂದು ಪದವು ಅರ್ಥವಾಗಿರಲಿಲ್ಲ. ಕಾದಂಬರಿ ಪೂರ್ತಿ ಓದಿದ ಮೇಲೆ ಮುನ್ನುಡಿಯ ಮೊದಲ ಪುಟ ಅರ್ಥವಾಗಿದೆ ಅಷ್ಟೇ.
ಮೂರೂ  ಕಾದಂಬರಿಗಳಲ್ಲಿ ನನಗೆ ಚಕೋರಿ  ಹೆಚ್ಚು ಇಷ್ಟವಾಯಿತು.


   

Wednesday, July 11, 2018

ಸದಾನಂದ ಮತ್ತು ಮಧುವನ

ಪುಸ್ತಕಗಳ ಹೆಸರು: ಸದಾನಂದ ಮತ್ತು ಮಧುವನ

ಲೇಖಕರು: ಎಮ್.ಕೆ.ಇಂದಿರಾ


Sequel ಗಳಾಗಿ ಬರುವ ಪುಸ್ತಗಳ ವಿಮರ್ಶೆಯನ್ನು ಒಟ್ಟಿಗೆ ಮಾಡಿದರೆ ಚೆನ್ನ ಎಂದು ಅನಿಸಿ ಈ ವಿಮರ್ಶೆ ಬರೆಯುತ್ತಿದ್ದೇನೆ.
ಸದಾನಂದ ನಾನು ಓದಿದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ. ಅಲ್ಲಿಯವರೆಗೂ  science fiction ಮತ್ತು  classic , ಈ ಎರಡೇ  genre ಗಳನ್ನು ಓದಿ ಅಭ್ಯಾಸವಾಗಿದ್ದ ನನಗೆ ಎಮ್.ಕೆ. ಇಂದಿರಾ ರವರ ಸದಾನಂದ ಹೊಸ ಲೋಕವನ್ನೇ ತೆರೆಯಿತು. ನಮ್ಮ ಈ ಹೊತ್ತಿಗೆ ಬಳಗ ಈ ಕಾವ್ಯವನ್ನು ಚರ್ಚೆ ಗೆ ಎತ್ತಿಕೊಂಡಾಗ ಬಹಳ ಉಲ್ಲಾಸ ಉತ್ಸಾಹಗಳಿಂದ ಪುಸ್ತಕವನ್ನು ತರಿಸಿಕೊಂಡು ಓದಿದ್ದೆ. ಆದರೆ ಕಾರಣಾಂತರಗಳಿಂದ ಆ ಚರ್ಚೆಗೆ ಹೋಗಲಾಗಿರಲಿಲ್ಲ ಮತ್ತು  ಪುಸ್ತಕದ ಬಗ್ಗೆ ಬ್ಲಾಗಲ್ಲಿ ಏನೂ ಬರೆಯಲೂ ಸಹ ಆಗಿರಲಿಲ್ಲ.  ಮೊನ್ನೆ ನಮ್ಮ ಇನ್ನೊಂದು ಪುಸ್ತಕ ಹಂಚಿಕೆಯ ಗುಂಪಾದ "ಪುಸ್ತಕದ ಹುಳುಗಳು"  ಗುಂಪಿನಲ್ಲಿ ತಿಂಗಳ ಪುಸ್ತಕಗಳ ವಿನಿಮಯದ ಸಮಯದಲ್ಲಿ ಮಧುವನ ಪುಸ್ತಕ ದೊರೆಯಿತು. ಇದು ಸದಾನಂದ ಕಾದಂಬರಿಯ ಮುಂದುವರೆದ ಭಾಗ ಎಂದು ಗೊತ್ತಾದಾಗ ಬಹಳ ಖುಷಿಪಟ್ಟು ತಂದು ಓದಿದೆ. ಹಾಗಾಗಿ ಎರಡು ಪುಸ್ತಕಗಳ ವಿಮರ್ಶೆ ಒಟ್ಟಿಗೆ ಬರೆಯಲು ಇದು ಎರಡನೆಯ ಕಾರಣ.

ಸದಾನಂದ:

ಆಗಿನ ಕಾಲಕ್ಕೆ ವಿಧವಾ ವಿವಾಹ ಎಷ್ಟು ಕಷ್ಟ, ಅಪಘಾತದಿಂದ ಹೆಣ್ಣೊಬ್ಬಳು ಅಂಗವಿಕಲೆಯಾದರೆ ಅವಳ ಜೀವನದ ಸ್ಥಿತಿ ಗತಿ ಏನು ಎಂಬುದನ್ನು ಎತ್ತಿ ತೋರಿಸಲಿಕ್ಕೆ , ಶಾಸ್ತ್ರಕ್ಕಿಂತ ಮನಸ್ಸುಗಳ ಮಿಲನ ಮುಖ್ಯ ಎಂದು ಆಗಿನ ಕಾಲದ ಜನಕ್ಕೆ ಅರಿವು ಮೂಡಿಸಲೆಂದೇ ಈ ಕಾದಂಬರಿಯನ್ನು ಲೇಖಕಿ ರಚಿಸಿದ್ದಾರೆ ಎನ್ನಬಹುದು. ಕಮಲ, ಗೌರಿ, ರಾಜು, ಮೂರ್ತಿ, ರಮಾನಂದ, ಮುಕ್ತಾ, ಜಾನಕಿ, ಎಂಕಟಮ್ಮ, ದುಂಡುಮಲ್ಲಿಗೆ ಎಸ್ಟೇಟು, ಚಿಕ್ಕಮಗಳೂರಿನ ಕಾಫಿ ತೋಟ...ಆಹಾ, ಮಲೆನಾಡಿನ ಆ ವರ್ಣನೆ ಅದ್ಭುತ. ಮೂರ್ತಿ ಮತ್ತು ಗೌರಿಯ ಸುತ್ತ ಆರಂಭವಾಗುವ ಈ ಕಥೆ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಳ್ಳೂತ್ತಾ ಹೋಗುತ್ತದೆ. ರಾಜುವಿನ ಪಾತ್ರ ಇಲ್ಲಿ ನನಗಂತೂ ಬಹಳ ಮೆಚ್ಚುಗೆಯಾದ ಪಾತ್ರ. ಸದಾಕಾಲ ಮನೆಯ ಮತ್ತು ತೋಟದ ಕೆಲಸ ಕಾರ್ಯಗಳನ್ನೂ ಗಮನಿಸಿಕೊಳ್ಳುತ್ತಾ, ತನ್ನ ಅಪ್ಪನಿಗೂ ಆಸರೆಯಾಗಿ ನಿಂತು, ಹಿರಿಯ ಮಗ ಮೂರ್ತಿ ಕೊಟ್ಟ ಪೆಟ್ಟನ್ನು ಚೇತರಿಸಿಕೊಳ್ಳಲಾಗದೇ ತತ್ತರಿಸಿದಾಗ ಮನೆಯ ಊರುಗೋಲಾಗಿ ನಿಂತು, ತನ್ನ ಜವಾಬ್ದಾರಿಗಳನ್ನು ನಿರ್ವಹಿಸಿದ ರೀತಿ, ತನ್ನ ವಿಧವೆ ಅಕ್ಕ ಕಮಲ ಗೆ ಲೈಬ್ರರಿಯಿಂದ ಸದಾನಂದರ ಕಾದಂಬರಿಗಳನ್ನು ಓದಲು ತಂದುಕೊಟ್ಟು, ತಾನೂ ಪುಸ್ತಕಗಳನ್ನು ಓದಿ ಅವರ ಪುಸ್ತಕಗಳಿಂದ ಪ್ರಭಾವಿತನಾಗಿ, ಕಡೆಗೆ ಅವರನ್ನು ಭೇಟಿ ಮಾಡಿ, ಸ್ನೇಹ ಗಳಿಸಿ...ಇನ್ನು ಮುಂದು ಹೇಳಿದರೆ ಕಾದಂಬರಿಯ ಕಥೆಯನ್ನೇ ಬಿಟ್ಟುಕೊಟ್ಟಂಟಾದೀತು. ಒಟ್ಟಿನಲ್ಲಿ, ಮೊದಲ ಕಾದಂಬರಿಯಲ್ಲಿ ರಾಜು-ಗೌರಿಯರ ಪಾತ್ರಕ್ಕೆ ಮೇಲುಗೈ. 

ಕಾದಂಬರಿಯ ಬಹುಪಾಲು  ಸಂಭಾಷಣೆಯಾಗಿ ಸಾಗುವುದು  ಇಲ್ಲಿ ಗಮನಾರ್ಹವಾದ ಅಂಶ . ಲೇಖಕಿ  ಹೇಳಬೇಕಾಗಿರುವುದೆಲ್ಲವನ್ನೂ ಪಾತ್ರಗಳ ನಡೆ-ನುಡಿಗಳ ಮೂಲಕ ಹೇಳಿಸಿರುವುದು ಈ ಕಾದಂಬರಿಯ ಧನಾತ್ಮಕ ಅಂಶಗಳಲ್ಲಿ ಒಂದು. ಕಮಲ ಮತ್ತು ಸದಾನಂದರವರ ವಿವಾಹದೊಂದಿಗೆ ಈ ಸದಾನಂದ ಕಾದಂಬರಿ ಅಂತ್ಯಗೊಳ್ಳುತ್ತದೆ.

ಮಧುವನ:

ಸದಾನಂದ ಕಾದಂಬರಿಯ ಅಂತ್ಯದಿಂದ ಮಧುವನ ಆರಂಭವಾಗುತ್ತದೆ. ಮಧುವನ ಸದಾನಂದರ ಎಸ್ಟೇಟಿನ ಹೆಸರು. ವಿಧುರರಾದ ಸದಾನಂದ ವಿಧವೆ ಕಮಲಾಳನ್ನು ಮದುವೆಯಾಗುವುದರ ಮೂಲಕ ಕಮಲಾಳ ಪ್ರವೇಶ ಮಧುವನಕ್ಕೆ ಆಗುತ್ತದೆ. ವಿಧವಾ ವಿವಾಹವೆಂದರೆ ಹುಬ್ಬೇರಿಸುತ್ತಿದ್ದ ಜನರಿಗೆ ಈ ಕಾದಂಬರಿಯ ಮೂಲಕ ದಿಟ್ಟ ಉತ್ತರ ನೀಡಿದ್ದಾರೆ ಎಂದೇ ಹೇಳಬಹುದು. ಕಮಲಳನ್ನು ಸದಾನಂದ ಬದಲಾಯಿಸುವ ರೀತಿ ನಿಜವಾಗಲೂ ಪ್ರತಿಯೊಬ್ಬ ಹೆಣ್ಣು ಮಗಳಿಗೆ ಪಾಠ. ನಾನು ಇದರಿಂದ ಜೀವನದ ಕೆಲವು ಪರಮ ಸತ್ಯಗ್ಫ಼ಳು ಮತ್ತು ಪ್ರಮುಖ ವಿಚಾರಗಳನ್ನು ಕಲಿತೆ. ಇಂದಿರಾರವರು ಬಹಳ ದೂರದೃಷ್ಟಿಯಿಂದ ಈ ಕಾದಂಬರಿಯನ್ನು ಬರೆದಿದ್ದರು ಎಂದೇ ಹೇಳಬೇಕು. ಆಗಿನ ಕಾಲದಲ್ಲಿ ಜನರು ಹೆದರುತ್ತಿದ್ದ C-Section delivery of a child ಬಗ್ಗೆಯೂ ಸಹ ಇಲ್ಲಿ ಪ್ರಸ್ತಾಪವಿದೆ. ಸಾಮಾಜಿಕ ಕಾದಂಬರಿ ಜನರನ್ನು ಬೇಗ ತಲುಪುತ್ತಿದ್ದವಾದ್ದರಿಂದ ಆ ಮೂಲಕ ಜನರನ್ನು ಹೊಸ ವಿದ್ಯಮಾನಗಳಿಗೆ, ಹೊಸ ವಿಚಾರಧಾರೆಗಳಿಗೆ ಪರಿಚಯಿಸುವ ಮತ್ತು ಜಾಗೃತಗೊಳಿಸುವ ಜಬಾಬ್ದಾರಿಯನ್ನು ಲೇಖಕಿ ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. 
ಮಧುವನ ಕಾದಂಬರಿಯ ಮತ್ತೊಂದು ಹೈಲೈಟ್ ಸಾಹಿತ್ಯ. ಸಾಹಿತ್ಯ ಚಿಂತನೆಯಲ್ಲಿ ಒಡಮೂಡಿರುವ ಹೊಸ ಹೊಸ ಕಲ್ಪನೆ ಮತ್ತು ವಿಚಾರಧಾರೆಯನ್ನು ಸದಾನಂದ ಪಾತ್ರದ ಮೂಲಕ ಲೇಖಕಿ ಅದ್ಭುತವಾಗಿ ಓದುಗರಿಗೆ ದಾಟಿಸಿದ್ದಾರೆ. ಲೇಖನಗಳನ್ನು ಹೇಗೆ ಬರೆಯಬೇಕು, ಕಥೆ ಹೇಗೆ ಹುಟ್ಟುತ್ತದೆ, ಅದು ಕಾದಂಬರಿ ಯಾವಾಗ ಆಗುತ್ತದೆ, ಎಲ್ಲರೂ ಯಾವಗಲೂ ಕಾದಂಬರಿಗಳಾನ್ನು ಏಕೆ ಬೆರೆಯಲಾಗುವುದಿಲ್ಲ ಎಂಬ ಗಹನವಾದ ಪ್ರಶ್ನೆಗಳಿಗೆ  ಸಮರ್ಥವಾದ ಉತ್ತರವಿದೆ. ಮಧುವನ ಕಾದಂಬರಿ ನನಗೆ ಹಿಡಿಸಿದ್ದು ಇದಕ್ಕೇ. 

ಮಿಕ್ಕಿದ್ದೆಲ್ಲಾ ಮಾಮೂಲು. ಎಲ್ಲ ಕಾದಂಬರಿಗಳಲ್ಲೂ ಇರುವುದು. ಆಗಿನ ಕಾಲದ "ಫಾರ್ವರ್ಡ್ ಥಿಂಕಿಂಗ್" ಕಾದಂಬರಿಗಳು ಎನ್ನಲಡ್ಡಿಯಿಲ್ಲ.




Wednesday, July 4, 2018

ಕಪ್ಪಂಚು ಬಿಳಿಸೀರೆ

ಪುಸ್ತಕದ ಹೆಸರು: ಕಪ್ಪಂಚು ಬಿಳಿಸೀರೆ
ತೆಲುಗು ಮೂಲ: ಯಂಡಮೂರಿ ವೀರೇಂದ್ರನಾಥ
ಕನ್ನಡ ಅನುವಾದಕರು: ರಾಜಾ ಚೆಂಡೂರ್
ಪ್ರಕಾಶನ: ಸುಧಾ ಎಂಟರ್ಪ್ರೈಸಸ್

ಈವಾಗಲಾದರೂ ಯಂಡಮೂರಿಯನ್ನು ಓದಿದೆನಲ್ಲಾ ಎಂದು ನೆಮ್ಮದಿಯಾಗುತ್ತಿದೆ. ಅವರು ಬಹಳ ಪ್ರಸಿದ್ಧ ಲೇಖಕರೆಂದು ಗೊತ್ತಿತ್ತು. ಅವರ ಬೆಳದಿಂಗಲ ಬಾಲೆ ಕಾದಂಬರಿ ಚಲನಚಿತ್ರ ಆಗಿದ್ದು ಗೊತ್ತಿತ್ತು. ಆದರೆ ಅವರ ಪುಸ್ತಕಗಳು  ಓದಲು ನಾನು ಇಷ್ಟು ವರ್ಷ ಕಾಯಬೇಕಾಗಬಹುದು ಎಂದು ಊಹಿಸಿರಲಿಲ್ಲ. ಪುಸ್ತಕಗಳನ್ನು ನೀಡಿದ ದೃಶ್ಯ ಪ್ರದೀಪ್ ಗೆ ಧನ್ಯವಾದಗಳು.

ಯಂಡಮೂರಿಯವರ ಲೇಖನ ಶೈಲಿ ಬಹಳ  captivating. ಪುಸ್ತಕ ಹಿಡಿದರೆ ಬಿಡುವ ಹಾಗೇ ಇಲ್ಲದಂತೆ  ಓದುಗನನ್ನು ಸೆರೆಹಿಡಿಯುವ ಅನೂಹ್ಯ ಶೈಲಿ. ಅವರ ಕಾದಂಬರಿಗಳು ಚಿತ್ರಗಳಾಗಿದ್ದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ, they are indeed very thrilling.

ಕಪ್ಪಂಚು ಬಿಳಿಸೀರೆ ಸೀರೆ ವ್ಯಾಪಾರಿಯೊಬ್ಬನ ಜೀವನ ಗಾಥೆ. ಹೈದರಾಬಾದಿನ ಬೀದಿಗಳಲ್ಲಿ ಸೀರೆ ಮಾರುತ್ತಿದ್ದವನೊಬ್ಬ ಕೋಟ್ಯಧಿಪತಿಯಾಗಿ, ಕಂಪನಿಯೊಂದರ ಮುಂದಾಳಾಗಿ, ಔನ್ನತ್ಯದ ಮೆಟ್ಟಿಲೇರಿ, ಅಲ್ಲಿಂದ ತಡವರಿಸಿ ಬಿದ್ದು, ಮತ್ತೆ ಎಚ್ಚೆತ್ತುಕೊಳ್ಳುವ ರೋಚಕ ಕತೆಯೇ ಈ ಕಾದಂಬರಿಯ ಜೀವಾಳ. ಸೀರೆಗಳ ಬಗ್ಗೆ, ಫ್ಯಾಷನ್ ಉದ್ಯಮದ ಬಗ್ಗೆ, ಗ್ರಾಹಕರ ಬಗ್ಗೆ, ಅವರ ಮನಸ್ಥಿತಿಯ ಬಗ್ಗೆ, ಮಾರ್ಕೆಟಿಂಗ್ ಒಳಸುಳಿಗಳು,ದ್ರೋಹ, ಮೋಸ,ಕಪಟ,....ನವರಸಗಳೂ ತುಂಬಿದ ಕಾದಂಬರಿಯಲ್ಲಿ ರೋಚಕತೆ ಒಂದು ತೂಕ ಹೆಚ್ಚು.

ಸಾಮಾಜಿಕ ಕಾದಂಬರಿಗಳನ್ನು ಅಷ್ಟಾಗಿ ಓದದ ನಾನು ಮೊದಲು ಕೈಗೆತ್ತಿಕೊಂಡಿದ್ದೇ ಈ ಪುಸ್ತಕ. ಓದಿ ನಿಜವಾಗಲೂ ಬಹಳಷ್ಟು ಕಲಿತೆ, ಸೀರೆ, ನೀರೆ ಮತ್ತು ವ್ಯಾಪರದ ಬಗ್ಗೆ !

ಇದು ಯಂಡಮೂರಿಯವರ ನಂಬರ್ ಓನ್ ಕಾದಂಬರಿ ಎಂದು ಎಲ್ಲರೂ ಸುಲಭಕ್ಕೆ ಹೊಗಳುವುದಿಲ್ಲ ಎಂದು ಕ್ಲೈಮಾಕ್ಸ್ ಓದಿದ ಮೇಲೆ ಅರ್ಥ ಆಯಿತು.

ಅದ್ಭುತ ಪುಸ್ತಕ.ಸದಾ ನೆನಪಿನಲ್ಲಿರುತ್ತದೆ.

ಬೆಸ್ಟ್ ಆಫ್ ಬಿ.ಜಿ.ಎಲ್.ಸ್ವಾಮಿ

ಪುಸ್ತಕದ ಹೆಸರು: ಬೆಸ್ಟ್ ಆಫ್ ಬಿ.ಜಿ.ಎಲ್.ಸ್ವಾಮಿ
ಲೇಖಕರು: ಬೇಲೂರು ರಾಮಮೂರ್ತಿ (ಸಂಪಾದಕರು)
ಪ್ರಕಾಶನ:ಅಂಕಿತ ಪುಸ್ತಕ

ನಾನು ಬಿ.ಜಿ.ಎಲ್. ಸ್ವಾಮಿಯವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ, "ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ" ಪುಸ್ತಕ ಒಂದನ್ನು ಬಿಟ್ಟು. ಹಾಗಾಗಿ, ಈ ಪುಸ್ತಕದಲ್ಲಿ ನಾನು ಆ ಪುಸ್ತಕದಿಂದ ಕೆಲವಾದರೂ ಕತೆಗಳು ಸಿಗಬಹುದೆಂಬ ಆಸೆಯಲ್ಲಿದ್ದೆ. ಆದರೆ ನನಗೆ ನಾನು ಓದಿದ್ದ ಪುಸ್ತಕದ ಕತೆಗಳೇ ಓದಿ ಸ್ವಲ್ಪ ಬೇಜಾರಾಯಿತು.

ಇನ್ನೊಂದು ಬೇಜಾರಿನ ವಿಷಯ ಎಂದರೆ, ಇಲ್ಲಿ, ಸ್ವಾಮಿಯವರ ಮಾತೆಲ್ಲಾ passive voice ನಲ್ಲಿರುವುದು. ಅಂದರೆ, ಸಂಪಾದಕರ  "ಸ್ವಾಮಿ ಹೀಗೆ ಹೇಳುತ್ತಾರೆ/ಹೇಳಿದರು" ಎಂಬ ರೀತಿಯ ಬರಹಗಳು ನನ್ನನ್ನು ಮತ್ತಷ್ಟು ನಿರಾಸೆಗೊಳಿಸಿದವು. ಕಾಲೇಜು ರಂಗ, ತರಂಗ, ಹಸಿರು ಹೊನ್ನು, ತಮಿಳು ತಲೆಗಳ ನಡುವೆ, ಇದರಲ್ಲೆಲ್ಲಾ ಸ್ವಾಮಿಯವರೇ ನಿರೂಪಕರು. ಹಾಗಾಗಿ ಹಾಸ್ಯ ನೇರ ನಮಗೆ ಮುಟ್ಟುತ್ತಿತ್ತು. ಬಿದ್ದೂ ಬಿದ್ದೂ ನಕ್ಕಿದ್ದೆ. ಇದರಲ್ಲಿ, ಹಾಸ್ಯ ಮರೆಯಾಗಿ ಬರಿ ವಿಡಂಬನೆಯೇ ಎದ್ದುಕಾಣುತ್ತಿದ್ದು, ಇಲ್ಲಿ ಸ್ವಾಮಿಯವರ ಪರಿಸ್ಥಿತಿ ಬಗ್ಗೆ ಅನುಕಂಪ ಮೂಡಿಬಿಡುತ್ತದೆ !

ನಾನು ಸ್ವಾಮಿಯವರ ಕಟ್ಟಾ ಅಭಿಮಾನಿಯಾಗಿರುವುದರಿಂದ, ಈ ಪುಸ್ತಕ ನನಗಂತೂ ಬೆಸ್ಟ್ ಅನಿಸಲಿಲ್ಲ. ಲೇಖನಗಳು ಬೆಸ್ಟ್. ಅನುಮಾನ ಇಲ್ಲ. ಆದರೇ, ಸ್ವಾಮಿಯವರೇ ನಿರೂಪಕರಾಗಿದ್ದಿದ್ದರೆ ಅದರ ಮಜವೇ ಬೇರೆ ಇರುತ್ತಿತ್ತು ಅನ್ನುವುದು ನನ್ನ ಅಭಿಪ್ರಾಯ.

ಒಮ್ಮೆ ಓದಿ ಪಕ್ಕಕ್ಕಿಡಬಹುದು.