Thursday, June 4, 2015

ಹಸಿವು ಹೆಚ್ಚಿಸುವ ಏಳು ರೊಟ್ಟಿಗಳು

ಪುಸ್ತಕದ ಹೆಸರು: ಏಳು ರೊಟ್ಟಿಗಳು
ಲೇಖಕರು: ಡಾ||ಕೆ. ಎನ್.ಗಣೇಶಯ್ಯ
ಪ್ರಕಾಶಕರು: ಅಂಕಿತ ಪುಸ್ತಕ

ಈ ಕಾದಂಬರಿ ಓದಿದ ತಕ್ಷಣ ನೀವು ಹೈದರಾಬಾದಿಗೆ ಬಸ್ ಹತ್ತಲಿಲ್ಲ ಅಂದರೆ ಕೇಳಿ ! ಓಹ್...ನಮ್ಮ ಪಕ್ಕದ ರಾಜ್ಯದಲ್ಲಿಯೂ ಇಂತಹಾ ರೋಚಕ ಕಥೆಯೊಂದು ನಡೆದಿರಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ. ಹೈದರಾಬಾದಿನ ನಿಜಾಮ ಬ್ರಿಟಿಷರಿಗೇ ಸಾಲ ನೀಡುವಷ್ಟು ಶ್ರೀಮಂತನಾಗಿದ್ದ ಎಂಬ ವಿಷಯ ಓದಿಯೇ ನಾನು ದಂಗಾದೆ. ಹೀಗೆಯೇ ಇನ್ನಷ್ಟು ಸತ್ಯಗಳನ್ನು ಬಿಚ್ಚಿಡುತ್ತಾ, ಕೆಲವು ಕಾಲ್ಪನಿಕ ಸಂಗತಿಗಳ ಸುತ್ತ ಕಥೆಯು ಹೆಣೆದುಕೊಂಡಿದೆ. ಇದೊಂದು ಕಿರುಕಾದಂಬರಿಯಾದರೂ ರೋಚಕತೆಯಲ್ಲಿ ಸಾಕಷ್ಟು ಹಿರಿದಾಗಿದೆ.

ಗಣೇಶಯ್ಯ ಅವರ ಇತರ ಕಾದಂಬರಿಗಳಿಗಿಂತಲೂ ಈ ಕಾದಂಬರಿಯಲ್ಲಿ ಐತಿಹಾಸಿಕ ವಿಷಯಗಳು ಸ್ವಲ್ಪ ಹೆಚ್ಚಿದೆ ಅಂತಲೇ ಹೇಳಬಹುದು. ಹಾಗಾಗಿ ಇದು ಸೈ-ಫೈ  ಕಾದಂಬರಿಗಳ ಸಾಲಲ್ಲಿ ನಿಲ್ಲುವುದಿಲ್ಲ.

ಹೈದರಾಬಾದಿನ ನಿಜಾಮನು ಬಚ್ಚಿಟ್ಟ ನಿಧಿಯ ಸುತ್ತ ಈ ಕಥೆಯು ಸುತ್ತುತ್ತದೆ. ಈ ಏಳು ರೊಟ್ಟಿಗಳು ಸಾಮಾನ್ಯವಾದದ್ದಲ್ಲ. ಅವು ಹಸಿವನ್ನು ತಣಿಸದೇ ಮತ್ತಷ್ಟು ಹೆಚ್ಚಿಸುವ ರೊಟ್ಟಿಗಳು.

ಹೈದರಾಬಾದಿನ ಕೆಲವು ಬಹು ಮುಖ್ಯ ಅರಮನೆಗಳಿಗೆ ಏಕೆ ಪ್ರವೇಶವಿಲ್ಲ ಎಂಬ ಕುತೂಹಲ ನಮ್ಮನ್ನು ಕಾಡದಿರುವುದಿಲ್ಲ. ಮತ್ತು, ನಿಷೇದಿತ ಪುಸ್ತಕಗಳ ಮಾರುಕಟ್ಟೆಯೊಂದು ಹೈದರಾಬಾದಿನಲ್ಲಿ ಏಕೆ ಅಸ್ತಿತ್ವದಲ್ಲಿದೆ ಎಂಬುದೂ ನಮಗೆ ಅರ್ಥವಾಗುತ್ತಾ ಹೋಗುತ್ತದೆ.

ಹೈದರಾಬಾದೆಂದರೆ ಬರೀ ಹುಸೇನ್ ಸಾಗರ್ ಲೇಕ್ ಅಲ್ಲ, ಸಫರ್ ದಾರ್ ಜಂಗ್ ಮ್ಯೂಸಿಯಮ್ ಅಲ್ಲ, ಚಾರ್ಮಿನಾರ್ ಅಲ್ಲ, ಅಲ್ಲಿನ ಪ್ರತಿ ಹಳೆಯ ಕಟ್ಟಡವೂ ಇತಿಹಾಸದ ಒಂದು ತುಣುಕಿನ ಸಾಕ್ಷಿಯಾಗಿ ನಿಂತಿದೆ ಎಂದು ಅನಿಸತೊಡಗುತ್ತದೆ.

ಒಟ್ಟಿನಲ್ಲಿ....ಏಳು ರೊಟ್ಟಿಗಳನ್ನು ತಿಂದ ಮೇಲೂ ಹಸಿವು ತೀರಿಲ್ಲ !

Monday, May 25, 2015

ಹೊಟ್ಟೆ ಹುಣ್ಣಾಗಿಸುವ ತಮಿಳು ತಲೆಗಳು

ಪುಸ್ತಕದ ಹೆಸರು: ತಮಿಳು ತಲೆಗಳ ನಡುವೆ
ಲೇಖಕರು: ಡಾ||.ಬಿ.ಜಿ.ಎಲ್.ಸ್ವಾಮಿ
ಪ್ರಕಾಶಕರು: ಐ.ಬಿ.ಎಚ್.

ನನ್ನ ಹುಟ್ಟು ಹಬ್ಬಕ್ಕೆ ಪತಿದೇವರು Kindle Paperwhite Ebook reader  ಅನ್ನು ಉಡುಗೊರೆಯಾಗಿ ಕೊಟ್ಟಿದ್ದರು. ನಾನು ಅದನ್ನು ಬರೋಬ್ಬರಿ ಎಂಟು ತಿಂಗಳು ಧೂಳು ಹಿಡಿಸಿದ್ದೆ. ಈಗ ಅನಾಯಾಸವಾಗಿ  ನನಗೆ ಸಿಕ್ಕಾಪಟ್ಟೆ ಸಮಯ ದೊರೆತಿರುವ ಶುಭ ಸಂದರ್ಭದಲ್ಲಿ, ಕಿಂಡಲ್ ಮೇಲೆ ಪ್ರಯೋಗಗಗಳನ್ನು ನಡೆಸಲು ಅಂತರಜಾಲದಿಂದ ಕೆಲವು ಕನ್ನಡ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಂಡೆ. ಬಹಳ ವರ್ಷಗಳಿಂದ ಹುಡುಕುತ್ತಿದ್ದ  ಈ ಪುಸ್ತಕ ಕೈಗೆ ಸಿಕ್ಕಾಗ ಬಹಳ ಖುಷಿಯಾಯಿತು.

ಬಿ.ಜಿ.ಎಲ್.ಸ್ವಾಮಿಯವರ ಹಾಸ್ಯಪ್ರಜ್ಞೆ ಅಮೋಘವಾದದ್ದು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಅಧ್ಯಾಪಕರಾಗಿದ್ದ ಅವರ ಉದ್ಯೋಗ ರಂಗದ ವಿಶಿಷ್ಟ ಅನುಭವಗಳನ್ನು ಬಹಳ ಸೊಗಸಾಗಿ ಮತ್ತು ಹಾಸ್ಯಮಯವಾಗಿ ಕಾಲೇಜು ರಂಗ ಮತ್ತು ಕಾಲೇಜು ತರಂಗ ಪುಸ್ತಕಗಳಲ್ಲಿ ವರ್ಣಿಸಿದ್ದಾರೆ. ತಮಿಳು ತಲೆಗಳ ನಡುವೆ ಪುಸ್ತಕದಲ್ಲಿ ತಮಿಳರ ಭಾಷಾಭಿಮಾನ, ತಮಿಳ ಸಾಹಿತ್ಯ ಚರಿತ್ರೆಯ ಕುರಿತದ್ದಾಗಿದೆ.ಸ್ವಾಮಿಯವರು ಸಸ್ಯಶಾಸ್ತ್ರ ಪ್ರಾಧ್ಯಾಪಕರಲ್ಲವೇ ? ಅವರಿಗೆ ತಮಿಳು ಚರಿತ್ರೆಯ ಗೊಡವೆಯಾಕೆ ಎಂದು ನೀವು ಕೇಳಬಹುದು. ನನಗೂ ಸಹಜವಾಗಿ ಈ ಪ್ರಶ್ನೆ ಮೂಡಿತು. ಆದರೆ, ಆಶ್ಚರ್ಯಕರ ವಿಷಯವೇನೆಂದರೆ ಸ್ವಾಮಿಯವರು ತಮಿಳು ಚರಿತ್ರೆಯ ಬಗ್ಗೆಯೂ ಸಾಕಷ್ಟು  ಸಂಶೋಧನೆಗಳನ್ನು ನಡೆಸಿ ಪೇಪರ್ ಗಳನ್ನು ಪ್ರಕಟಿಸಿದ್ದಾರೆ. ತಮಿಳರು ಅವರ ಭಾಷಾಭಿಮಾನಕ್ಕೆ ಹೆಸರಾದಂಥವರು. ಅವರ ಸಾಹಿತ್ಯ ಚರಿತ್ರೆಯಲ್ಲಿನ ಕೆಲವು loopholes ಗಳು ಅವರಿಗೂ ತಿಳಿದಿದ್ದರೂ ಸಹ  ಅದನ್ನು ಒಪ್ಪಿಕೊಳ್ಳದಿರುವ ಹಲವಾರು ಪ್ರಸಂಗಗಳನ್ನು ಬಿ.ಜಿ.ಎಲ್.ಸ್ವಾಮಿಯವರು ಅತ್ಯಂತ ಹಾಸ್ಯಮಯವಾಗಿ ವರ್ಣಿಸಿದ್ದಾರೆ. ಅದಕ್ಕೆ ಅವರು " ತಮಿಳೇತರ, ತಮಿಳು ದ್ರೋಹಿ" ಇತ್ಯಾದಿ ಬಿರುದಾಂಕಿತಗಳಿಂದ ನಿಂದಿಸಲ್ಪಟ್ಟಿದ್ದಾರೆ ಸಹ. 

ಇದ್ದ ಸತ್ಯವನ್ನು ಒಪ್ಪಿಕೊಳ್ಳದಿರುವುದು ವೈಜ್ಞಾನಿಕ ಸಂಶೋಧನೆಗಳಲ್ಲಿ ಮಾತ್ರ ನಡೆಯುತ್ತದೆ ಎಂದು ಭಾವಿಸಿದ್ದ ನನಗೆ ಈ ಪುಸ್ತಕ ಕಣ್ತೆರೆಸಿತು. ಚರಿತ್ರೆಯ ಅಧ್ಯಯನದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಉಪಯೋಗಿಸಿ ಕಂಡುಹಿಡಿದ ಸತ್ಯಗಳನ್ನು ಚರಿತ್ರಕಾರರು ಒಪ್ಪಿಕೊಳ್ಳರು ಎಂಬ ಸತ್ಯದ ಅರಿವಾಯಿತು.ಇದು ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿರುವ ಒಂದು ಪಿಡುಗು ಎಂದು ತಿಳಿಯಿತು. ಪ್ರಬಲ ವಿರೋಧ ಮತ್ತು ಬಹಿಷ್ಕಾರದ ನಡುವೆಯೂ ಬಿ.ಜಿ.ಎಲ್.ಸ್ವಾಮಿಯವರು ಸತ್ಯದ ಪ್ರತಿಪಾದನೆಯಿಂದ ಹಿಂಜರಿಯದಿರುವುದು ಅವರ ವ್ಯಕ್ತಿತ್ವ ಘನತೆ, ಸತ್ಯಕ್ಕೆ ಅವರ ನಿಷ್ಟೆ ಮತ್ತು ಬದ್ಧತೆಯನ್ನು ತೋರಿಸುತ್ತದೆ. ಇದು ನಾವು ಈ ಪುಸ್ತಕದಿಂದ ಕಲಿಯಬೇಕಾದ ಪಾಠ.

ಕೆಲವು ಪ್ರಸಂಗಗಳನ್ನು ಓದಿ ನಾನು ಎಷ್ಟು ನಕ್ಕಿದ್ದೇನೆ ಎಂದರೆ....ನಿಜವಾಗಿಯೂ ಹೊಟ್ಟೆ ಹುಣ್ಣಾಗಿಹೋಗಿತ್ತು. ಮಧ್ಯ ರಾತ್ರಿ, ಮಟ ಮಟ ಮಧ್ಯಾಹ್ನಗಳನ್ನು ಲೆಕ್ಕಿಸದೇ ಗಹಗಹಿಸಿ ನಕ್ಕು ಮನೆಯವರೆಲ್ಲಾ ಗಾಬರಿಯಾಗುವಂತೆ ಮಾಡಿದ್ದೇನೆ :-)

ಕೆಲವು ಪ್ರಸಂಗಗಳು ನಿಮಗಾಗಿ:

ಬಿ.ಜಿ.ಎಲ್.ಸ್ವಾಮಿ ಅವರ ಪರಿಚಯದ ಬೋರ್ಡು:
ಪಿ.ಚಿ.ಇಲ್ಲ.ಸಾಮಿ, Crop Department.

"ಸಾಹಿತ್ಯವೆಲ್ಲ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಯಿತು ಶಾರ್ !"
"ಮತ್ತೆ ತೋಲ್ಕಾಪ್ಪಿಯರ್ ಹೇಗೆ ಉಳಿದುಬಿಟ್ಟಿತು ?"
"ಅದೇ ಸರ್ ಆ ಕಾವ್ಯದ ಶಕ್ತಿ ! ತಮಿಳರಲ್ಲದ ನಿಮಗೇನು ಗೊತ್ತು ತಮಿಳಿನ ಮಹಿಮೆ !"

"ನಿಮ್ಮ ಸಂಶೋಧನೆಯ ವಿಷಯವೇನು ?"
"ಚಂಗಕಾಲದ ಹುಡುಗಿಯರು"
"ನಿಮ್ಮ ವಿಭಾಗದಲ್ಲಿ ಮತ್ತೊಬ್ಬರೂ ಸಹ ಇದೇ ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರಲ್ಲ ?"
"ಇಲ್ಲ, ಶಾರ್. ಅವರು  ಚಂಗಕಾಲದ ಹುಡುಗಿಯರು ವಿಷಯದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ"
"ಇನ್ನೊಬ್ಬರು..."
"ಅವರ ವಿಷಯ ಚಂಗಕಾಲದ ಮಕ್ಕಳು "
"ಅಲ್ಲ ರಿ...ಮಕ್ಕಳಲ್ಲಿ ಹುಡುಗರು, ಹುಡುಗಿಯರು ಒಟ್ಟಿಗೆ ಸೇರುತ್ತಾರೆ ಅಲ್ಲವೆನ್ರಿ.."
"ಇಲ್ಲಾ ಶಾರ್, ಒಂದರಿಂದ ಹತ್ತು ವರ್ಷದ ವೆರೆಗೆ ಮಾತ್ರ ಮಕ್ಕಳು. ಹತ್ತರಿಂದ ಹದಿನಾರರ ವರೆಗೆ ಹುಡುಗ ಹುಡುಗಿಯರು."

ಇನ್ನಷ್ಟು ನಗಬೇಕಿದ್ದರೆ ಪುಸ್ತಕವನ್ನು ಓದಿ ! :-)

Monday, May 18, 2015

ಉತ್ತರಕ್ಕಾಗಿ ಅಲೆದಾಡಿಸುವ ಶಿಲಾಕುಲ ವಲಸೆ

ಪುಸ್ತಕದ ಶೀರ್ಷಿಕೆ: ಶಿಲಾಕುಲ ವಲಸೆ
ಕರ್ತೃ: ಡಾ|| ಕೆ.ಎನ್.ಗಣೇಶಯ್ಯ
ಪ್ರಕಟಣೆ: ಅಂಕಿತ ಪುಸ್ತಕ, ಬೆಂಗಳೂರು

ಆಂಗ್ಲದ ಡಾವಿಂಚಿ ಕೋಡ್ ನಂತೆ ಕನ್ನಡದಲ್ಲಿ  ಹೊಸ ರೀತಿಯ ಸೈನ್ಸ್ ಫಿಕ್ಷನ್ ಬರಹಗಳ ಹರಿಕಾರರೆಂದೇ ಹೇಳಬಹುದಾದ ಡಾ|| ಕೆ.ಎನ್. ಗಣೇಶಯ್ಯ ಅವರ ಹನ್ನೆರಡನೆಯ ಕೃತಿ ಇದು.

"ಕನಕ ಮುಸುಕು" ಕಾದಂಬರಿಯಿಂದ ಹಿಡಿದು ಶಿಲಾಕುಲ ವಲಸೆಯ ವರೆಗೆ ನಿರೂಪಣಾ ಶೈಲಿಯಲ್ಲಿ ಸಮಾನತೆಯಿದ್ದರೂ,ಪಾತ್ರಗಳು ಪುನರಾವರ್ತನೆಯಾದರೂ,  ಕಥಾವಸ್ತು ಮತ್ತು ಕಥಾ ಹಂದರದ ಆಳ ಮತ್ತು ವಿಸ್ತಾರಗಳು ಬೇರೆಯಾಗಿವೆ.ಕಾದಂಬರಿಗಳ ನಿರೂಪಣೆಯನ್ನು ಮಾಡುವಾಗ ಅವರು ಸತ್ಯಗಳನ್ನು ಪುಷ್ಟೀಕರಿಸಲು ಕೊಡುವ ದಾಖಲೆಗಳು, ಚಿತ್ರಗಳ ಸಾಕ್ಷ್ಯಾಧಾರಗಳು ನಮ್ಮನ್ನು ನಿಬ್ಬೆರಗಾಗಿಸುತ್ತದೆಯಾದರೂ, ಈ ಕಥೆಗಳನ್ನೇ ಸಂಪೂರ್ಣ ಸತ್ಯ ಎಂದು ನಂಬಲಾಗದು, ನಂಬಲೂಬಾರದು. ಚಕ್ರವರ್ತಿ ವಿಕ್ರಮಾದಿತ್ಯ, ಮೈಸೂರಿನ ವೊಡೆಯರ್, ವಿಜಯನಗರ ಸಾಮ್ರಾಜ್ಯಗಳು, ಚಾಣಕ್ಯ, ಬುದ್ಧ, ಅಶ್ವಘೋಷ ನಿಂದ ಹಿಡಿದು, ನೆಹರು ಮತ್ತು ಬಿನ್ ಲಾಡೆನ್ ರ ವರೆಗೂ ಎಲ್ಲರೂ ಕೆ.ಎನ್. ಗಣೇಶಯ್ಯ ನವರ ಕಥಾ ಹಂದರದಲ್ಲಿ ಬಂದು ಹೋಗಿದ್ದಾರೆ. ಈ ಕಾದಂಬರಿಯಲ್ಲಿ ಗಣೇಶಯ್ಯರವರು ಆರ್ಯ-ದ್ರಾವಿಡ ಸಿದ್ಧಾಂತ ಮತ್ತು ದೇವರ ಪರಿಕಲ್ಪನೆಯನ್ನು ತಮ್ಮ ಕಥಾವಸ್ತುವನ್ನಾಗಿಸಿಕೊಂಡಿದ್ದಾರೆ.

ಕಥೆಯನ್ನು ಹೇಳಿದರೆ ಅದನ್ನು ಓದುವ ಸ್ವಾರಸ್ಯವೇ ಹೋಗಿಬಿಡುತ್ತದೆಯಾದ್ದರಿಂದ ಕಥೆಯನ್ನು ಇಲ್ಲಿ ಹೆಚ್ಚು ಹೇಳುವುದಿಲ್ಲ.

ನನ್ನ ಬಗ್ಗೆ ನಾನೇ ಹೇಳಿಕೊಳ್ಳುತ್ತಿಲ್ಲ, ಆದರೆ ಒಂದಂತೂ ನಿಜ,ದೇವರು ಮನುಷ್ಯನ ಕಲ್ಪನೆ ಮತ್ತು ಸೃಷ್ಟಿ ಯಾಕಾಗಿರಬಾರದು, ಮೂರ್ತಿಪೂಜೆ ಮಾನವನ ಅಸ್ತಿತ್ವ ಮತ್ತು ವಿಕಾಸಕ್ಕೆ ಅನಿವಾರ್ಯ ಯಾಕಾಗಿರಬಾರದು ಎಂದು ನಾನು ೨೦೦೯ ರಿಂದ ಯೋಚಿಸುತ್ತಾ ಬಂದಿದ್ದೆ. ಇದಕ್ಕೆ ಕಾರಣ ನಾನು ಎಮ್.ಎಸ್.ಸಿ ಮತ್ತು ಎಮ್.ಫಿಲ್ ಮಾಡುತ್ತಿದ್ದ ಸಮಯದಲ್ಲಿ ಕಂಡ ಕೆಲವು ಪ್ರಯೋಗಸಿದ್ಧ ಸತ್ಯಗಳು, ಮತ್ತು ನಮ್ಮ ಆಲೋಚನಾರೀತಿಯಲ್ಲಿ ಆದ ಮಹತ್ತರವಾದ ಸಕಾರಾತ್ಮಕ ಬದಲಾವಣೆಗಳು.ಆದರೆ, ಸಂಪ್ರದಾಯಸ್ಥರ ಮನೆಯಲ್ಲಿ ವೈಚಾರಿಕ ವಿಭಿನ್ನತೆಯ ಚರ್ಚೆ ಅಪಾಯಕಾರಿಯಾದ್ದರಿಂದ ನನ್ನ ಆಲೋಚನೆಗೆ ಪುಷ್ಟಿ ಕೊಡುವ ಆಧಾರಗಳನ್ನು, ನನ್ನಂತೆ ಯೋಚಿಸುವ ವ್ಯಕ್ತಿಗಳನ್ನು ಮೌನವಾಗಿ ಸಿಕ್ಕಸಿಕ್ಕಲ್ಲೆಲ್ಲಾ  ಹುಡುಕುತ್ತಲೇ ಇದ್ದೆ. ಕೆ.ಎನ್.ಗಣೇಶಯ್ಯ ನವರು ಅದರ ಬಗ್ಗೆ ಕಾದಂಬರಿಯನ್ನೇ ಬರೆದರು .:-)

ನನ್ನ ಆಲೋಚನೆಗಳು ವಿಷ್ಣುವಿನ ದಶಾವತಾರಗಳ ಹಿಂದಿನ ಮರ್ಮ, ಸತ್ಯ, ಅರ್ಥ, ಔಚಿತ್ಯ ಮತ್ತು ಪ್ರಸ್ತುತೆಯ ಸುತ್ತ ಅಷ್ಟೇ ತಿರುಗಾಡುತ್ತಿತ್ತು. ಆದರೆ ಗಣೇಶಯ್ಯರವರು ಮೂಲತಃ ದೇವರ ಕಲ್ಪನೆಯ ಪ್ರಶ್ನೆಯನ್ನೇ ಕೇಳಿ ತಮ್ಮ ಅಗಾಧ ಯೋಚನಾ ಸಾಮರ್ಥ್ಯ ಮತ್ತು ಕಲ್ಪನಾಶಕ್ತಿಯನ್ನು ಮೆರೆದಿದ್ದಾರೆ. ಮತ್ತು ನನ್ನನ್ನು ಕಾಡುತ್ತಿದ್ದ ಕೆಲವು ಮೂಲಭೂತ ಪ್ರಶ್ನೆಗಳಿಗೆ ಸಾಕ್ಷ್ಯಾಧಾರಗಳ ಸಮೇತ ಉತ್ತರವನ್ನು ಒದಗಿಸಿದ್ದಾರೆ. ಅದನ್ನು ಓದಿ ಧನ್ಯಳಾದ ತೃಪ್ತಿ ನನಗಿದೆ. ಮಿಕ್ಕಿದ್ದು ಕಲ್ಪನೆ. ಅದರ ಇತಿಮಿತಿಗಳನ್ನು ನಾನು ಅರಿತಿದ್ದೇನೆ. ಕಥೆಗೆ ಅಷ್ಟು ಕಲ್ಪನೆ ಅವಶ್ಯವೆಂದೂ ಭಾವಿಸುತ್ತೇನೆ.

ಈ ಪುಸ್ತಗಳನ್ನು ಓದಿದ ನಂತರ ಆಂಗ್ಲರು ನಮ್ಮನ್ನು ಎಂತಹ ಬೌದ್ಧಿಕ ದಾಸ್ಯಕ್ಕೆ ತಳ್ಳಿದರು ಎಂದು ಬೇಜಾರಂತೂ ಆಗುತ್ತದೆ. ಜರ್ಮನ್ನರ ಸಂಸ್ಕೃತದ ಪ್ರೀತಿಯ ಹಿಂದೆ ಇರಬಹುದಾದ ನಿಜವಾದ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಇಲ್ಲಿ ನಾವು ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. 

ವೈನಾಡಿನ ಎಡಕಲ್ಲು ಗುಡ್ಡದ ಗುಹೆಯಿಂದ ಆರಂಭವಾಗುವ ಯಾತ್ರೆ ಸರಸ್ವತಿ ನದಿ ಇತ್ತೆಂದು ಹೇಳಲಾಗುವ ಜಾಗದಲ್ಲಿ ಪರ್ಯವಸಾನಗೊಳ್ಳುತ್ತದೆ. ಈ ಕಥಾಯಾತ್ರೆಯಲ್ಲಿ ನಾವು ಶುದ್ಧ ಅಲೆಮಾರಿಗಳಾಬಿಡುವುದಂತೂ ನಿಜ. ವಲಸೆಹೋಗುವ ಮಜವೇ ಬೇರೆ !ಮೊದಲೆ ತಿರುಗಾಟದ ಹುಚ್ಚಿರುವ ನನಗೆ ಈಗಲೇ ಅವರು ಹೇಳಿರುವ ಜಾಗಕ್ಕೆಲ್ಲಾ ಹೋಗಬೇಕೆಂದು ಅನಿಸಿದೆ. ತಾಂತ್ರಿಕ ಕಾರಣಗಳಿಂದ ಸುಮ್ಮನಿರಬೇಕಾದ ಅನಿವಾರ್ಯತೆ ಇದೆ :-)

ಈ ರೀತಿಯ ಪುಸ್ತಕಗಳ ಓದು ನಮ್ಮ logical thinking ಅನ್ನು ಮತ್ತಷ್ಟು ಪುಷ್ಟೀಕರಿಸಬಲ್ಲದು.ವಿಜ್ಞಾನ, ತಂತ್ರಜ್ಞಾನ ಮತ್ತು ಆಧ್ಯಾತ್ಮದ ಜಟಿಲ ಗಂಟುಗಳ ಜಾಲ ಭೇದಿಸಲು ಹೊಸ ಹೊಳಹುಗಳನ್ನು ನೀಡಬಲ್ಲದು.