Wednesday, August 15, 2018

ನಿರ್ಧಾರ

ಪುಸ್ತಕದ ಹೆಸರು: ನಿರ್ಧಾರ
ತೆಲುಗು ಮೂಲ: ಯಂಡಮೂರಿ ವೀರೇಂದ್ರನಾಥ್
ಕನ್ನಡಕ್ಕೆ:ರಾಜಾ ಚೆಂಡೂರ್

ಒಂದೆಳೆಯ ಕಥೆಯು ಯಂಡಮೂರಿ ವೀರೇಂದ್ರನಾಥ್ ಅವರ ಕಲ್ಪನಾ ಶಕ್ತಿಯಲ್ಲಿ ಒಂದು ಉತ್ತಮ ಕಾದಂಬರಿಯಾಗಬಲ್ಲದು ಎಂಬುದಕ್ಕೆ ಈ ಕಾದಂಬರಿ ಸಾಕ್ಷಿ. ಕಿಡ್ನಿ transplant ಕ್ರಿಯೆ ಯ ಹಿಂದೆ ಏನೆಲ್ಲಾ ನಡೆಯುತ್ತದೆ, ರೋಗಿಯ ಮನಸ್ಥಿತಿ, ರೋಗಿಯ ಮನೆಯವರ ಮನಸ್ಥಿತಿ ಹೇಗಿರುತ್ತದೆ, ಡಾಕ್ಟರ್ ಗಳ ನಡವಳಿಕೆ, ಸಹಾಯ ಮಾಡುವವರ ಹಿಂದಿನ ಧ್ಯೇಯೋದ್ದೇಶಗಳು,  ಇವೆಲ್ಲವನ್ನು ಪರಿಚಯಿಸುವ ವಿಶೇಷ ಕಾದಂಬರಿ ಇದು. ಮಾರಣಾಂತಿಕ ರೋಗವನ್ನು ತಣ್ಣಗೆ accept  ಮಾಡಿಕೊಂಡು ಸಾಯುವ ಕಡೆಯ ಕ್ಷಣದ ವರೆಗೂ ಬದುಕಿನಲ್ಲಿ  ಸಕಾರಾತ್ಮಕ ಚಿಂತೆ ಮಾಡುವ ವಿಶೇಷ ಮನುಷ್ಯರು...ಅಬ್ಬಬ್ಬಾ...ಯಂಡಮೂರಿ ತಮ್ಮ ಕಾದಂಬರಿಯ ಪಾತ್ರ ರಚನೆಯಲ್ಲಿ ಪ್ರತಿಬಾರಿಯೂ ವಿವಿಧತೆ ಮೆರೆದಿದ್ದಾರೆ.

ಇಲ್ಲೂ ಸಹ ಹೆಣ್ಣು ಮಗಳಿಗೆ ಆದ ಅನ್ಯಾಯವೇ ಪ್ರಧಾನ. ಇಲ್ಲೂ ಒಂದಿಬ್ಬರು ಹೆಣ್ಣುಮಕ್ಕಳು ಬಹಳ ಜಾಣೆಯರು.

ಸುಮದ್ಯುತಿ ಎಂಬ ವಿಶೇಷ ಹೆಸರುಳ್ಳ ಕನ್ಯೆಯ ದಾರುಣ ಜೀವನ ಕಥೆಯಿದು. ಅವಳ ಕ್ಲಾಸ್ಮೇಟ್ ಒಬ್ಬ ಒಂದು ದಿನ ಅಚಾನಕ್ಕಾಗಿ, casual ಆಗಿ ಅವಳ ಮನೆಗೆ ಬರುತ್ತಾನೆ. ಅದೃಷ್ಟವೋ ದುರದೃಷ್ಟವೋ, ಅಂದು ಅವಳ ವಧುಪರೀಕ್ಷೆ. ವರನಾಗುವವನು ಒಂದು ಅರೆಘಳಿಗೆ ಇವನನ್ನು ನೋಡುತ್ತಾನೆ. ಅಲ್ಲಿಂದ ಇವರ ಮೂರೂ ಜನರ ಜೀವನ ಮಹತ್ವದ ತಿರುವು ಪಡೆಯುತ್ತದೆ. ಕ್ಲಾಸ್ಮೇಟ್ ಈ ಕಥೆ ನಿರೂಪಿಸುವ ರೀತಿಯಲ್ಲಿ ಕಥೆ ಸಾಗುತ್ತದೆ.  ಇವರ ಜೀವನದಲ್ಲಿ ಆಗುವ ಘಟನೆಗಳು ಅಸಾಮಾನ್ಯ, ಆಕಸ್ಮಿಕ. ನಾನು ಕಥೆ ಎಳೆಯನ್ನು ಬಿಟ್ಟುಕೊಡಲು ಇಚ್ಛಿಸದೇ ಇಷ್ಟೇ ವಿವರಣೆ ನೀಡುತ್ತಿದ್ದೇನೆ. ಯಂಡಮೂರಿಯವರು ಕಥಾ ನಿರೂಪಣೆಯಲ್ಲಿ ನಿಜವಾಗಿಯೂ ಒಂದು ಅದ್ಭುತ ಓಟದ ಶೈಲಿಯನ್ನು ತಂದಿದ್ದಾರೆ.  ಒಂದೇ ಗುಕ್ಕಿನಲ್ಲಿ ಈ ಕಾದಂಬರಿಯನ್ನು ಹಗಲು ರಾತ್ರಿ ಎನ್ನದೆ ಓದಿ ಮುಗಿಸಿದ್ದೇನೆ.

ಈ ಕಾದಂಬರಿಯಲ್ಲಿ ನನ್ನನ್ನು ಬಹಳವಾಗಿ ಕಾಡುವ ಪಾತ್ರ ಜಾನ್ ಡೇವಿಡ್ ನದ್ದು. ಜೀವನದಲ್ಲಿ ಕೆಲವು ಮಿತ್ರರು ಮಾತ್ರ ನಮ್ಮ ಸ್ಪೂರ್ತಿಯ ಸೆಲೆಯಾಗಿ, ಸದಾ ಬೆಂಗಾವಲಾಗಿ, ಊರುಗೋಲಾಗಿ, ದಾರಿದೀಪವಾಗಿ ನಿಲ್ಲಬಲ್ಲರು. ಕಥಾನಾಯಕನಿಗೆ ಜಾನ್ ಡೇವಿಡ್ ಇವೆಲ್ಲವೂ ಆಗುತ್ತಾನೆ. ನಿಜ ಜೀವನದಲ್ಲಿ ಇಂಥ ಒಬ್ಬ ಮಿತ್ರನ ಇರುವನ್ನು ನಮ್ಮ ಮನಸ್ಸು ಬಯಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸತ್ಯವೇನಂದರೆ, ಆ ತರಹದ ನಿಃಸ್ವಾರ್ಥ ಮಿತ್ರರು ಈ ಜಗತ್ತಲ್ಲಂತೂ ಖಂಡಿತಾ ದೊರೆಯುವುದಿಲ್ಲ. ಕಲ್ಪನೆಯ ಜಗತ್ತಲ್ಲೇ ಅದು ಸಾಧ್ಯವೆಂದು ನಾವು ಮನಸ್ಸು ಗಟ್ಟಿಮಾಡಿಕೊಳ್ಳಬೇಕು.

ಇಲ್ಲಿನ ಕೆಲವು ಮಾತುಗಳು ಮನಸ್ಸಿಗೆ ಬಹಳ ಸಾಂತ್ವನ ನೀಡಿ, ಸಮಸ್ಯೆಯನ್ನು ಯೋಚಿಸುವ ನಮ್ಮ ರೀತಿಯನ್ನೇ ಬದಲಾಯಿಸಬಲ್ಲ ಶಕ್ತಿ ಹೊಂದಿದೆ. ಹಾಗಾಗಿ ಈ ಪುಸ್ತಕ ಸಂಗ್ರಹಯೋಗ್ಯ. 

No comments:

Post a Comment