Thursday, April 23, 2020

ಪರ್ವತದಲ್ಲಿ ಪವಾಡ

ನಾನು ಈವರೆಗೂ ಆಂಗ್ಲದಿಂದ ಕನ್ನಡಕ್ಕೆ ಅನುವಾದವಾಗಿರುವ ಪುಸ್ತಕಗಳನ್ನು ಓದಿರಲಿಲ್ಲ.ಇದಕ್ಕೆ ಕಾರಣ ಇಷ್ಟೆ.ಪುಸ್ತಕದ ನಿಜವಾದ ರುಚಿಯು ಮೂಲದಲ್ಲಿಯೇ ಇರುತ್ತದೆ ಎಂದು ನನ್ನ ನಂಬಿಕೆ . ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಪುಸ್ತಕವು ಅನುವಾದಗೊಳ್ಳುವ ಆಗ ಅದು ತನ್ನ ಶೈಲಿ ಮತ್ತು ಸ್ವಾದವನ್ನು ಕಳೆದುಕೊಳ್ಳುತ್ತದೆ ಎಂಬುದು ನನ್ನ ಅನಿಸಿಕೆಯಾಗಿತ್ತು. ಸಂಸ್ಕೃತದಿಂದ ಆಂಗ್ಲಕ್ಕೆ ಮತ್ತು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಗೊಂಡ ಪುಸ್ತಕಗಳಲ್ಲಿ ಈ ವಿದ್ಯಮಾನವು ಸಾಕಷ್ಟು ಕಂಡಿತ್ತು.ಹಾಗಾಗಿ ನಾನು ಎಂದಿಗೂ ಆಂಗ್ಲದಿಂದ ಅನುವಾದವಾಗಿರುವ ಯಾವುದೇ ಪುಸ್ತಕವನ್ನು ಓದಬಾರದೆಂದು ನಿರ್ಧರಿಸಿ ಮೂಲ ಪುಸ್ತಕಗಳನ್ನು ಓದಲು ಬಯಸುತ್ತಿದ್ದೆ.ಸಂಯುಕ್ತಾ ಪುಲಿಗಲ್ ಅವರು ಅನುವಾದಿಸಿರುವ "ಪರ್ವತದಲ್ಲಿ ಪವಾಡ" ಪುಸ್ತಕವನ್ನು ಓದಿದಮೇಲೆ ಅನುವಾದ ಸಾಹಿತ್ಯದ ಬಗೆಗಿನ ನನ್ನ ಅನಿಸಿಕೆ ಸಂಪೂರ್ಣವಾಗಿ ಬದಲಾಗಿದೆ.ಈ ಪುಸ್ತಕವನ್ನು ಸಂಯುಕ್ತ ನನಗೆ ಮೂರು ವರ್ಷದ ಹಿಂದೆ ಕೊಟ್ಟಿದ್ದರಾದರೂ ನಾನು ನನ್ನದೇ ಆದ ಕಾರಣಗಳಿಂದ ಈ ಪುಸ್ತಕವನ್ನು ಓದಲಾಗಿರಲಿಲ್ಲ. ಈ ಲಾಕ್ ಡೌನ್ ಇಂದಾಗಿ  ಹಲವಾರು ಪುಸ್ತಕಗಳನ್ನು ಓದಲು ಅವಕಾಶ ಸಿಕ್ಕಿತು . ಪರ್ವತದಲ್ಲಿ ಪವಾಡ ಪುಸ್ತಕವನ್ನು ಓದುವ ಮುಂಚೆಯೇ ನಾನು ಸಂಯುಕ್ತ ರವರ ಲ್ಯಾಪ್ ಟಾಪ್ ಪರದೆಯಾಚೆಗೆ ಎಂಬ ಪುಸ್ತಕವನ್ನು ಓದಿದೆ.ಅವರ ಸುಲಲಿತವಾದ ಬರಹದ ಶೈಲಿ ಬಹಳ ಇಷ್ಟವಾಗಿತ್ತು.ಅವರ ಸ್ವಂತ ಬರಹಗಳು ಇಷ್ಟು ಹೃದ್ಯವಾಗಿರುವಾಗ ಅವರ ಅನುವಾದಶೈಲಿ ಹೇಗಿರಬಹುದು ಎಂಬ ಕುತೂಹಲದೊಂದಿಗೆ ಈ ಪುಸ್ತಕವನ್ನು ನಾನು ಓದಲು ಪ್ರಾರಂಭಿಸಿದೆ . ನಮ್ಮ ದೇಶದಲ್ಲಿ ಆ್ಯಂಡಿಸ್ ಪರ್ವತವಿದ್ದಿದ್ದರೆ ಮತ್ತು ಕನ್ನಡಿಗನೊಬ್ಬ ಏನಾದರೂ ಆ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಅವನ ಮನಸ್ಸಿನಲ್ಲಿ ಯಾವ ರೀತಿಯ ತಳಮಳಗಳು ಉಂಟಾಗುತ್ತಿದ್ದವೋ, ಅಂತೆಯೇ ಇದೆ ಸಂಯುಕ್ತಾ ರವರ ಅನುವಾದ.ಎಲ್ಲಿಯೂ ಸಹ ಇದು ಅನ್ಯದೇಶೀಯ ಪುಸ್ತಕದ ಅನುವಾದ ಎಂದು ಅನಿಸದ ಹಾಗೆ ಅವರು ಆಪ್ತವಾಗಿ ಪುಸ್ತಕವನ್ನು ಕನ್ನಡೀಕರಿಸಿದ್ದಾರೆ.ಈ ಬೃಹತ್ ಸಾಹಸಕ್ಕೆ ಅವರು ಖಂಡಿತಾ ಅಭಿನಂದನಾರ್ಹರು .

ಹಿಮಾಲಯದ ಹಿಮಪಾತಗಳಲ್ಲಿ ಕಳೆದು ಹೋದ ಮತ್ತು ಮರಣ ಹೊಂದಿದ ಎಷ್ಟೋ ಜನರ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ.ಆದರೆ ದೂರದ ದಕ್ಷಿಣ ಅಮೇರಿಕದಲ್ಲಿ ,ಜಗತ್ತಿನ ಅತ್ಯಂತ ಉದ್ದನೆಯ ಪರ್ವತ ಶ್ರೇಣಿಯಾದ ಆ್ಯಂಡಿಸ್ ಶಿಖರಗಳಲ್ಲಿ ವಿಮಾನ ಅಪಘಾತದಿಂದ ಸಿಕ್ಕಿಹಾಕಿಕೊಂಡ ಅವರ ಕಥೆಯನ್ನು ನಾನಂತೂ ಕೇಳಿರಲೂ ಇಲ್ಲ ಓದಿಯೂ ಇರಲಿಲ್ಲ.ಕೈಯಲ್ಲಿ ಹಿಡಿದ ತಕ್ಷಣ ಕೆಳಗಿಡಲಾಗದಂತೆ ಓದಿಸಿಕೊಂಡು ಹೋಯಿತು ಈ ಪುಸ್ತಕ.ನ್ಯಾಂಡೋ ಪರಾಡೋ ಅವರು ಆಂಡಿಸ್ ಪರ್ವತಗಳ ಮಧ್ಯದಲ್ಲಿ ವಿಮಾನ ಅಪಘಾತದಿಂದಾಗಿ   ಸಿಕ್ಕುಹಾಕಿಕೊಂಡು ಪಟ್ಟ ಪಾಡು ಎಷ್ಟು ಕಷ್ಟಕರವಾದದ್ದು ಎಂದು ಓದುತ್ತಾ ಹೋದರೆ, ನಾವು ಪಟ್ಟ ಮತ್ತು ಪಡುತ್ತಿರುವ ಕಷ್ಟಗಳೆಲ್ಲವೂ ತೃಣಸಮಾನ ಎಂದೆನಿಸಿ ನಮ್ಮ ಬದುಕಿನ ದೃಷ್ಟಿಕೋನವೇ ಬದಲಾಗುತ್ತದೆ. ನಲವತ್ತು ದಿನದ ಗೃಹಬಂಧನ ವನ್ನೇ ದೊಡ್ಡ ವಿಷಯವನ್ನಾಗಿಸುವ ನಾವು ಎಪ್ಪತ್ತೆರಡು ದಿನಗಳ ಆ ಘೋರ ಪರದಾಟವನ್ನು ಕನಸಿನಲ್ಲಿಯೂ ಸಹ ಕಲ್ಪಿಸಿಕೊಳ್ಳಲಾರೆವು. ತಿನ್ನಲು ಏನೂ ಆಹಾರವಿಲ್ಲದೆ ಕಡೆಗೆ ಸತ್ತ ಸ್ನೇಹಿತರ ಶವಗಳನ್ನೇ ತಿನ್ನುವ ಪಾಡು ಇನ್ಯಾರಿಗೂ ಬಾರದಿರಲಿ ಎಂದೆನಿಸಿಬಿಡುತ್ತದೆ . ಬದುಕುಳಿಯಲು ಇರುವ ಛಲ ಮತ್ತು ಬದುಕಲು ಪಡುವ ಕಷ್ಟ ಎರಡೂ ನಮ್ಮ ಕಣ್ತೆರೆಸುತ್ತವೆ. ಜೀವನದ ಬಗೆಗಿನ ನಮ್ಮ ವ್ಯಾಖ್ಯಾನವೇ ಬದಲಾಗಿಬಿಡುತ್ತದೆ.ದೇವರ ಬಗೆಗಿನ ನಂಬಿಕೆ ಮತ್ತು ದೇವರೆಂದರೆ ಯಾರು ? ಏನು ?ಎಂಬ ಪ್ರಶ್ನೆಗಳು ಪ್ರಶ್ನೆಯಾಗಿಯೇ ಉಳಿದರೂ ಉತ್ತರಗಳಿಗೆ ಹಲವಾರು ದಾರಿಗಳು ತೆಗೆದುಕೊಂಡಂತೆ ಎನಿಸುತ್ತದೆ . ಕೆಲವೆಡೆ ಸ್ವಲ್ಪ ಸಿನಿಮೀಯ ಅನಿಸಿದರೂ ಎಲ್ಲಿಯೂ ಸಹ ನಾವು ಆಸಕ್ತಿ ಕಳೆದು ಕೊಳ್ಳದಂತೆ ಕಥೆಯನ್ನು ನಿರೂಪಿಸುವ ಕಥೆಗಾರ ಯಶಸ್ವಿಯಾಗಿದ್ದಾರೆ ಮತ್ತು ಅದನ್ನುಅಷ್ಟೇ ಭಾವಪೂರ್ಣವಾಗಿ ,ಆಪ್ತವಾಗಿ , ಅಷ್ಟೇ ಸಂವೇದನಾ ಪೂರ್ಣವಾಗಿ ಅನುವಾದಿಸುವಲ್ಲಿ ಸಂಯುಕ್ತಾ ರವರು ಸಹ ಯಶಸ್ವಿಯಾಗಿದ್ದಾರೆ . ಈ ಪುಸ್ತಕ ಹಲವಾರು ಜನರ ಬಾಳನ್ನು ಬೆಳಕಾಗಿಸಬಲ್ಲುದು ಎಂಬುದು ಮೂಲ ಬರಹಗಾರರ ಆಶಯವಾಗಿತ್ತು. ಕನ್ನಡಕ್ಕೆ ಅನುವಾದಗೊಂಡ ಈ ಪುಸ್ತಕವು ಕನ್ನಡಿಗರ ಬಾಳನ್ನು ಸಹ ಬೆಳಗಿಸಬಲ್ಲುದು ಎಂಬುದನ್ನು ಸಂಯುಕ್ತಾ ಅವರ ಅನುವಾದ ಸಾಧಿಸಬಲ್ಲದು ಎಂಬ ಆಶಯ ನಮಗಿದೆ .ಕನ್ನಡಕ್ಕೆ ನನಿಜವಾಗಿಯೂ ಇಂತಹ ಅನುವಾದಕರ ಅವಶ್ಯಕತೆ ಇದೆ . ಕನ್ನಡಕ್ಕೆ ಇಂತಹ ಪುಸ್ತಕಗಳ ಅವಶ್ಯಕತೆ ಬಹಳ ಇದೆ. ಇಂತಹ ಅದ್ಭುತವಾದ ಪುಸ್ತಕವನ್ನು ಕೊಟ್ಟಂತಹ ಸಂಯುಕ್ತಾ ರವರಿಗೆ ಮತ್ತೊಮ್ಮೆ ಧನ್ಯವಾದಗಳು.

No comments:

Post a Comment