Thursday, March 1, 2018

ಅಪೂರ್ವ ಹಂಸಯಾನ

ಪುಸ್ತಕದ ಹೆಸರು : ಹಂಸಯಾನ
ಲೇಖಕರು: ತೇಜಸ್ವಿನಿ ಹೆಗಡೆ
ಪ್ರಕಾಶಕರು: ಜಯಶ್ರೀ ಪ್ರಕಾಶನ

ಥ್ರಿಲ್ಲರ್ ಕಾದಂಬರಿಗಳ ಗುಣವೇ ರೋಚಕತೆ. ಅನಿರೀಕ್ಷಿತ ತಿರುವುಗಳು ಭರಪೂರ ತುಂಬಿದ್ದು, ಸಣ್ಣ ಸಣ್ಣಕೊಂಡಿಗಳು ಎಲ್ಲ ಎಲ್ಲೆಲ್ಲೋ ಚೆಲ್ಲಾಪಿಲ್ಲಿ ಆಗಿ, ಓದುಗ ತಾನು ಕಾದಂಬರಿಯನ್ನು ಓದುತ್ತಾ ತನ್ನದೇ ಲೆಕ್ಕಾಚಾರಗಳಲ್ಲಿ ಆ ಕೊಂಡಿಗಳನ್ನೆಲ್ಲಾ ಸೇರಿಸಲು ಯತ್ನಿಸುತ್ತಿರುವಾಗ ಲೇಖಕ ಯಾವುದೋ ಪುಟದಲ್ಲಿ ಹೊಸ ತಿರುವೊಂದನ್ನಿಟ್ಟು ಓದುಗನ ಲೆಕ್ಕಾಚಾರವನ್ನೆಲ್ಲಾ ಬುಡಮೇಲಾಗಿಸಿ, ಕೊಂಡಿಗಳನ್ನೆಲ್ಲಾ ಮತ್ತೆ ಕೆಡಿಸಿಬಿಡುತ್ತಾನೆ. ಥ್ರಿಲ್ ಇರುವುದು ಅಲ್ಲಿಯೇ. ಲೇಖಕರನನ್ನು outwit ಮಾಡಲು ಓದುಗ ಕಾತರನಾಗಿರುತ್ತಾನೆ, ಈ ಕಡೆ ಓದುಗನನ್ನು outsmart ಮಾಡಲು ಲೇಖಕ ಹವಣಿಸುತ್ತಿರುತ್ತಾನೆ. ಕತ್ತಿಯಲುಗಿನ ನಡೆಯಂತೆ ಇರುವ ಈ ಸಾಹಿತ್ಯಪ್ರಕಾರದಲ್ಲಿ ಒಂದು ಚೂರು ಎಡವಿದರೂ ಕಾದಂಬರಿಯಲ್ಲಿ ರೋಚಕತೆಯ ಸಾವಾಗುತ್ತದೆ. ತೇಜಸ್ವಿನಿ ಹೆಗಡೆಯವರು ಈ ಕತ್ತಿಯಂಚಿನ ನಡುಗೆಯನ್ನು ಬಹಳ ಎಚ್ಚರಿಕೆಯಿಂದ ನಡೆದು ದಡ ಸೇರಿ, ಒಂದು ಅದ್ಭುತ ಕಾದಂಬರಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಕನ್ನಡದಲ್ಲಿ ಥ್ರಿಲ್ಲರ್ ಕಾದಂಬರಿ ಬರೆದ ಪ್ರಥಮ ಮಹಿಳೆ ಇವರು ಅನಿಸುತ್ತದೆ. ಆ ಮಟ್ಟಿಗೆ ಇದೊಂದು ದಾಖಲೆ.

ನನ್ನ ಓದಿನ ಮಿತಿಯಲ್ಲಿ, ನಾನು ಥ್ರಿಲ್ಲರ್ ಕಾದಂಬರಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿಕೊಂಡಿದ್ದೇನೆ. ಒಂದು ಪತ್ತೆದಾರಿ ಕಥೆಗಳು, ಇನ್ನೊಂದು ಸಸ್ಪೆನ್ಸ್ ಥ್ರಿಲ್ಲರ್ಸ್. ಕೊಲೆ ಮಾಡಿದವನು/ ಕದ್ದವನು ಯಾರು ಎಂಬುದು ಸಸ್ಪೆನ್ಸ್ ನಲ್ಲಿ ಇರುತ್ತದೆಯಾದರೂ, ಡಿಟೆಕ್ಟಿವ್ ಕಥೆಗಳಿಗೂ, ಸಸ್ಪೆನ್ಸ್ ಥ್ರಿಲ್ಲರ್ಸ್ ಗೂ ಮೂಲ ಕಥನದ ರೀತಿಯಲ್ಲೇ ವ್ಯತ್ಯಾಸವನ್ನು ಗುರುತಿಸಬಹುದು. ತೇಜಸ್ವಿನಿಯವರು, ಡಿಟೆಕ್ಟಿವ್ ಕಥೆಗೆ ಸಸ್ಪೆನ್ಸ್ ಬೆರೆಸುವುದಲ್ಲದೆ, ಅಧ್ಯಾತ್ಮ ಮತ್ತು ಭಾವನೆಗಳನ್ನು ಬೆರೆಸಿ ಬೇರೆಯದ್ದೇ ರೀತಿಯ ವಿಶಿಷ್ಟ ಸ್ವಾದ ನೀಡುವ ಪಾಕವೊಂದನ್ನು ಹೊರತೆಗೆದಿದ್ದಾರೆ. ಲೇಖಕಿ ಹೆದರಬೇಕಿಲ್ಲ, ಈ ಹೊಸರೀತಿಯ ಪಾಕ ಸ್ವಾದಿಷ್ಟವಾಗಿದೆ.

ಸಾಮಾನ್ಯವಾಗಿ ಭಾವನಾಶೂನ್ಯ ಮತ್ತು ರೋಚಚಕಪೂರ್ಣ ಥ್ರಿಲ್ಲರ್ ಗಳಿಗೆ ಒಗ್ಗಿಕೊಂಡ ಓದುಗನ ಮನಸ್ಥಿತಿ, ಈ ಕಾದಂಬರಿಯನ್ನೋದಲು ಸ್ವಲ್ಪ ಹದಗೊಳ್ಳಬೇಕಾಗುತ್ತದೆ. ಲೇಖಕಿ ಭರಪೂರ ಅರವತ್ತು ಪುಟಗಳನ್ನು ನಮ್ಮ ಬುದ್ಧಿಯನ್ನು ಹದಗೊಳಿಸಲಿಕ್ಕೇ ಮೀಸಲಿಟ್ಟಿದ್ದಾರೆ. ಅವರ ಜಾಣ್ಮೆ ಮೆಚ್ಚುವಂಥದ್ದು. ಆದರೆ, ಅರವತ್ತು ಪುಟಗಳಷ್ಟು ಕಾಯಿಸಿ, ಕಥನ ಪ್ರಾರಂಭವಾಗಲು  ನಮ್ಮ ತಾಳ್ಮೆಯನ್ನು ಅವರು ಅಷ್ಟೋಂದು ಪರೀಕ್ಷಿಸಬಾರದಿತ್ತು. ಬೇರೆ ಬೇರೆ ಘಟನೆಗಳನ್ನಾದರೂ ನೀಡಿ ಸ್ವಲ್ಪ ಕಥೆಯನ್ನು ಅಲ್ಲಿ ವೇಗಗೊಳಿಸಬಹುದಿತ್ತು ಎಂದು ನನಗನಿಸಿತು. ಈ ಮಾತನ್ನು ಈ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಕಾದಂಬರಿಕಾರ ಡಾ|| ಕೆ.ಎನ್.ಗಣೇಶಯ್ಯ ಸಹ ಹೇಳಿದ್ದರು. ಅದನ್ನು ನಾನೂ ಅನುಮೋದಿಸುತ್ತೇನೆ.

ಕಥೆ ಬಗ್ಗೆ ಹೇಳಿದರೆ ಕೊಲೆಯಾಗಿ ಹೋಗುತ್ತೇನೆ ಆದ್ದರಿಂದ....ಅದರ ಬಗ್ಗೆ ಸೊಲ್ಲೆತ್ತುವುದಿಲ್ಲ. ಕಥೆಯ ಧನಾತ್ಮಕ ಅಂಶಗಳು ಹಲವಾರಿದೆ. ಅದನ್ನು ಒಮ್ಮೆ ನೋಡಿಬಿಡೋಣ:

ಗಣೇಶಯ್ಯ ಸರ್ ಹೇಳಿದಂತೆ ಥ್ರಿಲ್ಲರ್ ಕಾದಂಬರಿಗಳಲ್ಲಿ ಈ ಕಾದಂಬರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಏಕೆಂದರೆ ಕಥಾ ಹಂದರ ಹೊಸತಲ್ಲವೆಂದು ಅಂತ್ಯದಲ್ಲಿ ಅನಿಸಿದರು, ಅದರ ನಿರೂಪಣೆಯಲ್ಲಿ ಹೊಸತನ ಇದೆ.Fact ಗಳನ್ನು ಬಹಳ ಎಚ್ಚರದಿಂದ ಸಂಗ್ರಹಿಸಿ, ಹೇರಳವಾಗಿ ಬಳಸಿಕೊಂಡಿದ್ದಾರೆ ಸಹ. fact ಗಳು ಹೇರಿಕೆ ಅನ್ನಿಸದೇ ಪಾತ್ರಗಳ ಬಾಯಲ್ಲಿ ಸಂಭಾಷಣೆಯಂತೆ ಬಂದಿರುವುದು ಕಾದಂಬರಿಯ ಹೈಲೈಟ್ ಗಳಲ್ಲಿ ಒಂದು. ನನ್ನ ಓದಿನ ಮಿತಿಯಲ್ಲಿ, ಭಾವಜೀವಿ ಕಥಾ ನಾಯಕಿ ಉಳ್ಳ ಪ್ರಥಮ ಥ್ರಿಲ್ಲರ್ ಕಾದಂಬರಿ ಇದು. ಆಂಗ್ಲದ ಬಹುತೇಕ ಥ್ರಿಲ್ಲರ್ ಗಳು, ಪತ್ತೆದಾರಿ ಕಾದಂಬರಿಗಳು ಬಹಳ ನಿರ್ಭಾವುಕ. ಕೊಲೆಗಳು ನಡೆಯುತ್ತಿರುತ್ತವೆ. ಭಯ ಓದುಗನಿಗೆ ಹೊರತು ನಾಯಕ/ನಾಯಕಿಯರಿಗಲ್ಲ. ಅಲ್ಲಿ ಅಬ್ಬಬ್ಬಾ ಅಂದರೆ ದ್ವೇಷ, ರೋಷ ಕಾಮ ಮತ್ತು ಪ್ರೇಮಗಳನ್ನು ಪಾತ್ರಗಳು ತಮ್ಮೊಳಗೆ ಸೆಳೆದುಕೊಳ್ಳಬಹುದು. ಅಲ್ಲಿನ ಕಥಾ ನಾಯಕ/ ನಾಯಕಿಯರು ಭಾವಾವೇಷಕ್ಕೆ ಒಳಗಾದ ಸಂದರ್ಭಗಳು ಕಡಿಮೆ. ಈ ಸಿದ್ಧಾಂತಕ್ಕೆ ತದ್ವಿರುದ್ಧವಾಗಿ ಇಲ್ಲಿ, ನಾಯಕಿಗೆ ಸುಮಾರು ಬಾರಿ ಅಳು ಬರುತ್ತದೆ. ಅವಳು ತನ್ನನ್ನು ಸಂಯಮಕ್ಕೆ ತಂದುಕೊಳ್ಳಲು ಹಲವಾರು ಬಾರಿ ಧ್ಯಾನಕ್ಕೆ ಮೊರೆ ಹೋಗುತ್ತಾಳೆ. ಹಲವಾರು ಬಾರಿ ಕೆಟ್ಟ ಕನಸು ಕಂಡು ಭಯಗೊಂಡು ಎಚ್ಚರವಾಗುತ್ತಾಳೆ. ಈ ಕಥಾ ಹಂದರಕ್ಕೆ ಇಂಥದ್ದೇ ನಾಯಕಿಯ ಅವಶ್ಯಕತೆ ಇರುವುದರಿಂದ ಇದನ್ನು ಧನಾತ್ಮಕ ಅಂಶ ಎಂದು ನೋಡಬಾರದು. ಅದಕ್ಕೆ ನಾನು ಹೇಳಿದ್ದು, ಈ ಕಥೆಯ ನೇಯ್ಗೆ ವಿಶೇಷವಾಗಿದೆ ಎಂದು.

ಸಂಪೂರ್ಣ ಕಾಲ್ಪನಿಕ ಕಥಾ ಚಿತ್ರಣವನ್ನು ಕೊಡುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆ. ಬೆಟ್ಟದಜ್ಜ ನಂಥಾ ಒಂದು ವ್ಯಕ್ತಿಯ ಚಿತ್ರಣ ಈ ಕಾದಂಬರಿಯ ಕೇಂದ್ರಬಿಂದು. ಅದೇ ಈ ಕಾದಂಬರಿಯ ಜೀವಾಳ ಕೂಡ. ಈ ಕಲ್ಪನೆ ನಿಜವಾಗಲೂ ಸಮರ್ಪಕವಾಗಿ ಮೂಡಿಬಂದಿದೆ. ಅಧ್ಯಾತ್ಮದ ನಿಜ ಆಯಾಮದ ಪ್ರಾಮಾಣಿಕ ನಿರೂಪಣೆ, ಹೊಳಹುಗಳಿದೆ. ಈ ಭಾಗ ಅದ್ಭುತವಾಗಿ ಮೂಡಿಬಂದಿದೆ.

ಹಂಸದನಡಿಗೆಯ ಬಗ್ಗೆ ಲೇಖಕಿ ಒಂದುಕಡೆ ವಿವರಿಸುತ್ತಾರೆ. ಈ ಕಾದಂಬರಿಯೂ ಹಾಗೇ ನಡೆದುಬಂದಿದೆ. ಅದು ಹೇಗೆ ಎಂದು ತಿಳಿದುಕೊಳ್ಳಲು ನೀವು ಕಾದಂಬರಿ ಓದಬೇಕಾಗುತ್ತದೆ. ಹಂಸ ತನ್ನ ಆಧ್ಯಾತ್ಮದ ಅರ್ಥದಿಂದಲೂ ಈ ಕಾದಂಬರಿಯಲ್ಲಿ ಸಾಕಾರಗೊಂಡಿದೆ . ಜಟಿಲಾರ್ಥಗಳುಳ್ಳ ಹಂಸತತ್ವವನ್ನು ಸರಳವಾಗಿ ಹೇಳಬಯಸುವ ಲೇಖಕಿಯ ಪ್ರಯತ್ನ ಶ್ಲಾಘನೀಯ.

ಗಣೇಶಯ್ಯ ಸರ್ ಒಂದು ಮಾತು ಹೇಳಿದ್ದರು. ತೇಜಸ್ವಿನಿ ಅವರು  smart readers ಅನ್ನು  outsmart ಮಾಡುವಲ್ಲಿ ತಕ್ಕಮಟ್ಟಿಗೆ ಗೆದ್ದಿದ್ದಾರೆ ಅಂತ. ಇದನ್ನು ನಾನು ತಕ್ಕಮಟ್ಟಿಗಷ್ಟೇ ಒಪ್ಪಬಲ್ಲೆ. ಪೂರ್ತಿ ಒಪ್ಪಲಾರೆ. ಅದಕ್ಕೆ ಕಾರಣ ನಾನು ಓದುವಾಗ ನನಗೆ ತೋಚಿದ ಕೆಲವು ಪ್ರಶ್ನೆಗಳು. ಇದಕ್ಕೆ ಲೇಖಕಿಯವರು ಉತ್ತರಿಸಿದರೆ ಆಗ ಪ್ರಾಯಶಃ ನಾನು ಒಪ್ಪಬಹುದು.

೧) ಕಥಾ ನಾಯಕಿಯ detective course ಬರಿ ಕ್ಯಾಮೆರಾ ಡಿಟೆಕ್ಟರ್ ಗಳನ್ನು ಕಂಡುಹಿಡಿಯುವಲ್ಲಿ ಸೀಮಿತವಾಗಿ ಹೋಗುತ್ತದೆ ಯಾಕೆ ? ಆಕೆಯನ್ನು trap ಮಾಡಬಹುದು ಎಂಬ ಮುಂದಾಲೋಚನೆ ಅವಳಿಗೆ ಇರಬೇಕಿತ್ತು. ಇದ್ದಿದ್ದರೆ ಕಥೆಗೆ ಮತ್ತಷ್ಟು ರೋಚಕತೆ ಇರುತ್ತಿತ್ತು.

೨) ವಿಲನ್ ಗಳ ಬಗ್ಗೆ ಅವಳಿಗೆ ಪೂರ್ಣ ಮಾಹಿತಿ ಮೊದಲೇ ದೊರಕಿಸಿಕೊಳ್ಳುವ ತಂತ್ರಗಳನ್ನು ಆಕೆ ಮಾಡಬಹುದಿತ್ತು. ಅವಳು ಅದಕ್ಕೆ ಖರ್ಚುಮಾಡುವ ಬುದ್ಧಿ ಮತ್ತು ಉಪಯೋಗಿಸುವ ತಂತ್ರಜ್ಞಾನದಲ್ಲಿ ಕಲ್ಪನೆಗೆ ವಿಪುಲ ಅವಕಾಶಗಳಿದ್ದವು. They have remained unused.

೩) ನಚಿಕೇತನ ಬಗ್ಗೆ ಆಕೆ ಏನೂ ಪತ್ತೆದಾರಿ ಮಾಡದಿರುವುದು ! ಯಾಕೆ ?!

೪) ರಣಹದ್ದುಗಳ ಕನಸಿನ ಭಾಗವನ್ನು ನಾನು ಎಲ್ಲೂ correlate ಮಾಡಲಾಗಲಿಲ್ಲ. ಕಥೆಯಲ್ಲಿ ಇದರ ಔಚಿತ್ಯವನ್ನು ಲೇಖಕಿಯವರು ತಿಳಿಸಬೇಕು.

ಆಕೆ ಲೇಖಕಿಯ ಸೋಗಿನಲ್ಲಿ ಬಂದಿರುವಳಾದರೂ,  ತನ್ನ ನಿಜ ಕಾರ್ಯ ಸಾಧನೆಯಲ್ಲಿ ಭಾವನೆಗೆ ಹೆಚ್ಚು ಒತ್ತು ನೀಡಿರುವಳಾದರೂ, ತನ್ನ ನಿಜರೂಪ ತಿಳಿಸದೇ, ಜಾಗರೂಕಳಾಗಿ ಎಲ್ಲಾ ಮಾಡಿದರೂ, ನಚಿಕೇತ ಮತ್ತು ಸುಮಾ ರ ಹಿನ್ನೆಲೆಯನ್ನು ಪತ್ತೆ ಮಾಡುವಲ್ಲಿ ತಲೆಗೆ ಹೆಚ್ಚು ಕೆಲಸ ನೀಡಬಹುದಿತ್ತು ಎಂದೆನಿಸಿತು.

ಪುಸ್ತಕ ನಿಜಕ್ಕೂ ಓದುಗನ ಮನಸ್ಸು ಗೆಲ್ಲುತ್ತದೆ. ಹಂಸಯಾನ ಖುಷಿ, ತೃಪ್ತಿ ಎರಡೂ ನೀಡುತ್ತದೆ. Atleast, ನನಗಂತೂ ಎರಡೂ ದೊರಕಿದೆ.

2 comments:

  1. ಮೊತ್ತ ಮೊದಲಿಗೆ, ಇಷ್ಟು ಸವಿವರವಾಗಿ ನನ್ನ ಕಾದಂಬರಿಯ ಕುರಿತು ಬರೆದು ನನ್ನ ಕೃತಿಗೆ ನೀಡಿದ ಗೌರವಕ್ಕಾಗಿ ನಿಮಗೆ ತುಂಬು ಮನದ ಧನ್ಯವಾದಗಳು ಲಕ್ಷ್ಮೀ. ಈಗ ನಿಮ್ಮ ಮೇಲಿನ ೪ ಪ್ರಶ್ನೆಗಳಿಗೆ ಉತ್ತರಿಸುತ್ತಾ…
    ೧) ಖಂಡಿತ ಮುಂದಾಲೋಚನೆ ಇರಬಹುದಿತ್ತೇನೋ. ನನ್ನ ಸೀಮಿತ ಪತ್ತೇದಾರಿ ತಲೆಯೊಳಗೆ ಅದಕ್ಕಿಂತ ಜಾಸ್ತಿ ಕ್ರಿಮಿನಲ್, ಚತುರ ಆಲೋಚನೆ ಬರಲಿಲ್ಲ! ಮುಂದ ಸಲ ಏನಾದರೂ ಪತ್ತೇದಾರಿ ಕಾದಂಬರಿ ಬರೆಯ ಹೋದರೆ (ಮತ್ತೊಂದು ಇದೇ ಥೀಮ್ ಮೇಲೆ ಬರೆಯುವುದರ ಕುರಿತು ನನಗೆ ಸಂಶಯವಿದೆ ;-) ) ಖಂಡಿತ ಈ ಪಾಯಿಂಟ್ ಜಾರಿಗೆ ತರುವೆ.. ಮತ್ತೂ ಮತ್ತೂ ಜಾಸ್ತಿ ಈ ವಿಷಯದ ಕುರಿತು ಪತ್ತೇ ಮಾಡಿಕೊಂಡೇ ಬರೆವೆ!
    ೨) ವಿಲನ್ ಯಾರು ಎಂಬುದೇ ಎಷ್ಟೋ ಸಲ ನಮಗೆ ಸ್ಪಷ್ಟವಿರುವುದಿಲ್ಲವಲ್ಲ! ಎಷ್ಟೇ ತಂತ್ರಜ್ಞಾನ ಇದ್ದಿರಲಿ. ಪಕ್ಕದಲ್ಲಿರುವವ ನಿಜ ಸ್ನೇಹಿತನೇ ಎನ್ನುವುದನ್ನು ಅರಿಯಬಲ್ಲಂಥ ಮನಸ್ಸನ್ನು ಓದುವ ಯಂತ್ರವಿನ್ನೂ ಸಿಕ್ಕಿಲ್ಲ ನೋಡಿ! (ಸಿಗುವುದೂ ಬೇಡ!)
    ೩) ಹಾಗೆ ನಚಿಕೇತನ ಬಗ್ಗೆ ಪತ್ತೇದಾರಿ ಮಾಡುವಷ್ಟು ಸಮಯ ಸಂದರ್ಭ ನಾಯಕಿಗೆ ಒದಗಿ ಬರಲಿಲ್ಲ... . ಘಟನೆಗಳು ಹಾಗೆ ನಡೆಯುತ್ತಾ ಹೋದವು.
    ೪) ಅವಳ ತಾಯಿಯ ದಾರುಣ ಸಾವಿನ ದೃಶ್ಯಕ್ಕೆ ಪ್ರತಿಮಾತ್ಮಕವಾಗಿ ಬಂದಿದ್ದು ಅಷ್ಟೇ.

    ಇದು ನನ್ನ ಮೊದಲ ಕಾದಂಬರಿ.. (ಇದರ ಮೊದಲು ಕೆಲವೇ ತಿಂಗಳೊಳಗೆ ಬಂದ ಹೊರಳುದಾರಿಯೇ ನನ್ನ ಮೊತ್ತಮೊದಲ ಕಾದಂಬರಿಯಾಗಿದ್ದರೂ ಇವೆರಡನ್ನೂ ಜಂಟಿಯಾಗಿ ಮೊದಲ ಟ್ವಿನ್ ಕಾದಂಬರಿಗಳೆನ್ನಬಹುದು). ಹೀಗಾಗಿ ಎಡವುಗಳು, ತೊಡಕುಗಳು ಸಾಕಷ್ಟಿವೆ. ಒಪ್ಪಿಕೊಳ್ಳುವೆ. ಖಂಡಿತ ತಿದ್ದಿಕೊಂಡು ಮುಂದಿನ ರಚನೆಯಲ್ಲಿ ಆದಷ್ಟು ಜಾಗೃತಳಾಗಿ ಬರೆಯಲು ಯತ್ನಿಸುವೆ. ಮಗದೊಮ್ಮೆ ಧನ್ಯವಾದಗಳು ನಿಮಗೆ.

    ReplyDelete
  2. ಯೋಚನೆ ಎಂಬುವುದು ಎಲ್ಲವನ್ನೂ ಮಿರಿದು ಕೇಳಿರುವ ಕಥೆಯನ್ನ ನಮ್ಮ ಯೊಚನೆಯಂತೆ ಸಹ ಬದಲಿಸಬಹುದು
    ಇದೂ ಸಹ ಓಂದು ತರಹ ಯೊಚನೆಯಾಗಿದೆ... .

    ReplyDelete